Breaking News

ಭಟ್ಕಳದ ರೇಪ್‌ & ಮರ್ಡರ್‌:ಕೋಮು ಗಲಭೆ ತಪ್ಪಿಸಲು ಅಮಾಯಕನಿಗೆ 7 ವರ್ಷ ಜೈಲು!ಮುರ್ಡೇಶ್ವರ: ಸುಮಾರು 7 ವರ್ಷಗಳ ಹಿಂದೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಮಾಯಕ ವ್ಯಕ್ತಿಯೊಬ್ಬರು ಬರೋಬ್ಬರಿ 6 ವರ್ಷ 8 ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಇದೀಗ ನ್ಯಾಯಾಲಯದಿಂದ ದೋಷಮುಕ್ತರಾಗಿ ಹೊರಬಂದಿದ್ದಾರೆ .

ಏನಿದು ತಲ್ಲಣ ಸೃಷ್ಟಿಸಿದ್ದ ಪ್ರಕರಣ ?

ಮುರ್ಡೇಶ್ವರದ ಹಿರೇಧೋಮಿಯಲ್ಲಿ  28 ಅಕ್ಟೋಬರ್ 2010 ರಂದು ಮಹ್ಮದ್ ಸಾದಿಕ್‌ ಎನ್ನುವವರ ಮನೆಯಲ್ಲಿ ಮನೆ ಕೆಲಸಕ್ಕಿದ್ದ  ಅದೇ ಗ್ರಾಮದ ಯಮುನಾ ನಾಯ್ಕ್‌ ಎನ್ನುವ ಯುವತಿಯನ್ನು ಸಾಮೂಹಿಕ ಅತ್ಯಾಚಾರ ಎಸಗಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಯುವತಿ ಮನೆಗೆ ಬಾರದಾಗ ಆತಂಕಗೊಂಡ ಪೋಷಕರು ಹುಡುಕಾಟಕ್ಕಿಳಿದಾಗ ಶೆಡ್‌ ವೊಂದರಲ್ಲಿ  ಶವ ಪತ್ತೆಯಾಗಿತ್ತು. ತನಿಖೆಯ ವೇಳೆ ಅತ್ಯಾಚಾರ ನಡೆದಿರುವುದು ಕಂಡು ಬಂದಿತ್ತು.

ಅತೀ ಕೋಮುಸೂಕ್ಷ್ಮ ಪ್ರದೇಶವಾದ ಭಟ್ಕಳದಲ್ಲಿ ಈ ಪ್ರಕರಣ  ತಲ್ಲಣ ಸೃಷ್ಟಿಸಿ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿತ್ತು ಮಾತ್ರವಲ್ಲದೆ ಗಲಭೆ ಸೃಷ್ಟಿಯಾಗುವ ಸೂಚನೆ ನೀಡಿತ್ತು.


ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಭಟ್ಕಳದಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನೆಯನ್ನು ನಡೆಸಿ ನೈಜ ಆರೋಪಿಗಳ ಬಂಧನಕ್ಕೆ ಒತ್ತಾಯ ಮಾಡಿದ್ದರು.

ಯುವತಿಯ ತಂದೆ ನಾಗಪ್ಪ ಅವರು ಮಗಳು ಕೆಲಸ ಮಾಡುತ್ತಿದ್ದ ಮನೆಯ ಮಾಲಿಕ ಮಹಮದ್‌ ಸಾದಿಕ್‌ ಸೇರಿದಂತೆ 9 ಜನರ ವಿರುದ್ಧ ದೂರನ್ನು ದಾಖಲಿಸಿದ್ದರು. ಇದು ಗಲಭೆ ಎದ್ದೇಳಲು ಕಾರಣವಾಗಿತ್ತು.


ಪರಿಸ್ಥಿತಿ ಕೈಮೀರುವುದನ್ನು  ಅರಿತ ಭಟ್ಕಳ ಪೋಲಿಸ್ ಇಲಾಖೆ ಕೆಲವೇ ದಿನಗಳ ಒಳಗೆ  ಮುರ್ಡೇಶ್ವರದ ವೆಂಕಟೇಶ ಹರಿಕಂತ್ರ  ಎನ್ನುವ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಜೈಲಿಗೆ ಕಳಿಸಿದ್ದರು.


ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ಅಂದಿನ ಡಿವೈಎಸ್‌ಪಿ ಎಂ.ನಾರಾಯಣ್‌ ಅತ್ಯಾಚಾರ ಮತ್ತು ಕೊಲೆ ನಡೆದ ಸ್ಥಳದಲ್ಲಿ ಬೈಕ್‌ ಇಟ್ಟು ಮೀನುಗಾರಿಕೆಗೆ ತೆರಳುತ್ತಿದ್ದ ವೆಂಕಟೇಶ್‌ರನ್ನು ವಶಕ್ಕೆ ಪಡೆದು ಅಪರಾಧಿ ಎಂದು ಬಿಂಬಿಸಿದ್ದರು.

ವಶಕ್ಕೆ ಪಡೆದ ಬಳಿಕ ಖಾಸಗಿ ಲಾಡ್ಜ್ ವೊಂದರಲ್ಲಿ  ವೆಂಕಟೇಶ್‌ರನ್ನು ಕೂಡಿ ಹಾಕಿ ಚಿತ್ರಹಿಂಸೆ ನೀಡಿ ತಾನೇ ಅಪರಾಧಿ ಎಂದು ಬಲವಂತವಾಗಿ  ಒಪ್ಪಿಸುವಂತೆ ಮಾಡಿ ಸಹಿ ಹಾಕಿಸಿಕೊಂಡಿದ್ದರು ಮಾತ್ರವಲ್ಲದೆ ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದರು.

ವೆಂಕಟೇಶ್‌ ಹರಿಕಂತ್ರ ಬಂಧನದ ನಂತರ ಹೇಳಿಕೆಗಳು ಹೊರ ಬಂದ ಪರಿಣಾಮ ಕೋಮು ದಳ್ಳುರಿ  ಭುಗಿಲೇಳಲು ಸಿದ್ದವಾಗಿದ್ದ ಜ್ವಾಲೆ ಆರಿ ಹೋಗಿತ್ತು. ಯಮುನಾ ಕುಟುಂಬದವರೂ ಪೊಲೀಸರ ಒತ್ತಡಕ್ಕೆ ಮಣಿದು ವೆಂಕಟೇಶ್ ಹೆಸರನ್ನು ಎಫ್ಐಆರ್‌ನಲ್ಲಿ ದಾಖಲಿಸಿದ್ದರು.


ಅತ್ಯಾಚಾರವಾಗಿ ಹತ್ಯೆಯಾಗಿದ್ದ ಸ್ಥಳದಲ್ಲಿ  ವೀರ್ಯದ ಅಂಶ, ಯುವತಿಯ ಕೈಯಲ್ಲಿ ಅಪರಾಧಿಯ ರೋಮಗಳು ಪತ್ತೆಯಾಗಿತ್ತು. ಅದನ್ನು ಸಂಗ್ರಹಿಸಿ ಹೈದ್ರಾಬಾದ್ ನ ವಿಧಿ ವಿಜ್ಞಾನ ಇಲಾಖೆಗೆ ಕಳುಹಿಸಿ ಪರೀಕ್ಷೆ ನಡೆಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ 5 ಬಾರಿ ವೆಂಕಟೇಶ್ ಅವರ  ಡಿಎನ್‍ಎ ಪರಿಕ್ಷೆಯನ್ನೂ ನಡೆಸಲಾಗಿತ್ತು.


ಪತ್ನಿಯ ಹೋರಾಟ

ಘಟನೆ ನಡೆದು ವೆಂಕಟೇಶ್‌ ಹರಿಕಂತ್ರ ಆರೋಪಿ ಎಂದು ತಿಳಿದ ಕೂಡಲೇ ಆತನ ಕುಟುಂಬಕ್ಕೆ ಜನರು ಬಹಿಷ್ಕಾರ ಹಾಕಿದಂತೆ ನಡೆದುಕೊಂಡರು. ಜೈಲು ಪಾಲಾದ ಕೂಡಲೇ ಪತ್ನಿ ಮತ್ತು ಇಬ್ಬರು ಮಕ್ಕಳು ತೀವ್ರ ಅವಮಾನ ಎದುರಿಸಿ ಯಾತನೆಯ ದಿನಗಳನ್ನು ಕಳೆಯಬೇಕಾಯಿತು.

ತನ್ನ ಪತಿ ನಿರಪರಾಧಿ ಎಂದು ಅರಿತ ಪತ್ನಿ ಮಹಾದೇವಿ ಕಾನೂನು ಹೋರಾಟಕ್ಕೆ ಇಳಿದರು.  ಪ್ರಸಿದ್ಧ ಕ್ರಿಮಿನಲ್‌ ವಕೀಲ ರವಿಕಿರಣ್‌ ಮುರ್ಡೇಶ್ವರ ಅವರು ವೆಂಕಟೇಶ್‌ ಪರ ವಾದ ಮಂಡಿಸಲು ಸಿದ್ಧರಾದರು.

ಪ್ರಕರಣದ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದ ರವಿಕಿರಣ್‌ ಅವರು ಸಮರ್ಥ ವಾದ ಮಂಡಿಸುವ ಮೂಲಕ ನಿರಪರಾಧಿಯಾದ ವೆಂಕಟೇಶ್‌ ಅವರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ನ್ಯಾಯಾಲಯದಲ್ಲಿ  ಸುದೀರ್ಘ‌ ವಾದ ಪ್ರತಿವಾದಗಳು  ನಡೆದು 51 ಜನರ ಸಾಕ್ಷಿ ಹೇಳಿಕೆ ಪಡೆದ ನಂತರ ಡಿಎನ್‍ಎ ವರದಿ ಆಧರಿಸಿ ಜೂನ್‌ 28 ರಂದು ಕಾರವಾರದ ಜಿಲ್ಲಾ  ನ್ಯಾಯಾಲಯ ಅತ್ಯಾಚಾರ ಮತ್ತು ಹತ್ಯೆಯಲ್ಲಿ ಆರೋಪಿ ಎಂದು ಬಿಂಬಿತವಾಗಿರುವ ವೆಂಕಟೇಶ್‌ ಪಾತ್ರವಿಲ್ಲ, ಅವರು  ನಿರಪರಾಧಿ ಎಂದು ಘೋಷಿಸಿ ತೀರ್ಪು ನೀಡಿ ನ್ಯಾಯವನ್ನು ಎತ್ತಿಹಿಡಿದಿದೆ.

ಭಟ್ಕಳದ ಅಂದಿನ ಡಿವೈಎಸ್‍ಪಿ ಎಂ. ನಾರಾಯಣ್ 2011ರಲ್ಲಿ ವಿಧಿವಿಜ್ಞಾನ ಇಲಾಖೆಯಿಂದ ಬಂದಿದ್ದ ವರದಿಯನ್ನ ಒಂದು ವರ್ಷದ ಕಾಲ ನ್ಯಾಯಾಲಯಕ್ಕೆ ನೀಡಿರಲಿಲ್ಲ. ಇದೂ ನ್ಯಾಯ ಗೆಲ್ಲಲು ಸಹಕಾರಿಯಾಗಿದೆ.


ಅಪರಾಧಿಗಳನ್ನು ಪತ್ತೆ ಹಚ್ಚಿ  ಶಿಕ್ಷಿಸಿ

ಘಟನೆ ನಡೆದ ಬಳಿಕ ತೀವ್ರ ಹೋರಾಟ ನಡೆಸಿದ್ದ ಶ್ರೀರಾಮ ಸೇನೆ ನ್ಯಾಯಲಯದ ತೀರ್ಪು ಬಂದ ಬಳಿಕ ಜೈಲಿನಿಂದ ಬಿಡುಗಡೆಯಾಗಿ ಬಂದ ವೆಂಕಟೇಶ್‌ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ ವೆಂಕಟೇಶ್‌ ಅವರಿಗಾದ ಅನ್ಯಾಯಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಕರಣದಲ್ಲಿ ವೆಂಕಟೇಶ್‌ ಅವರನ್ನು ಬಲಿಪಶು ಮಾಡಲಾಗಿದ್ದು, ಇಬ್ಬರು ಅನ್ಯಧರ್ಮದ ಯುವಕರ ಹೆಸರು ಪ್ರಕರಣದಲ್ಲಿ ಕೇಳಿ ಬಂದಿದ್ದು ಅವರನ್ನು ಬಿಟ್ಟು  ಕೋಮು ಗಲಭೆ ತಡೆಯಬೇಕು ಎನ್ನುವ ಉದ್ದೇಶದಲ್ಲಿ  ವೆಂಕಟೇಶ್‌ಗೆ ಶಿಕ್ಷೆ ನೀಡಿ ನೈಜ ಅಪರಾಧಿಗಳ ರಕ್ಷಣೆ ಮಾಡಿದ್ದಾರೆ ಎಂದರು.ನರಕ ಯಾತನೆ ಅನುಭವಿಸಿದ್ದೇನೆ
. ಜೈಲು ವಾಸದಿಂದ ಮುಕ್ತಿ ಹೊಂದಿ ಹೊರ ಬಂದ ವೆಂಕಟೇಶ್‌ ಅವರು ಮಾತನಾಡಿ ನಾನು ನಿರಪರಾಧಿಯಾದರೂ ಪೊಲೀಸರು ನನಗೆ ಚಿತ್ರ ಹಿಂಸೆ ನೀಡಿದ್ದಾರೆ. 6 ವರ್ಷ 8 ತಿಂಗಳನ್ನು ಜೈಲಿನಲ್ಲಿ ಕಳೆದಿದ್ದೇನೆ ,ಈ ವೇಳೆ ನನ್ನ ಹೆಂಡತಿ ಮಕ್ಕಳು ಅನುಭವಿಸಿದ ಕಷ್ಟ ಹೇಳತೀರದು. ನನ್ನ ಕಳೆದು ಹೋದ ಜೀವನ ಮತ್ತೆ ಸಿಗುವುದಿಲ್ಲ . ಆದರೆ ಅತ್ಯಾಚಾರಕ್ಕೀಡಾಗಿ ಹತ್ಯೆಗೀಡಾಗಿರುವ ಯಮುನಾಗೆ ನ್ಯಾಯ ಸಿಗಬೇಕೆನ್ನುವುದು ನನ್ನ ಗುರಿ ಎಂದರು. ನನ್ನನ್ನು ಹಿಂಸಿಸಿ ಶಿಕ್ಷೆ ಅನುಭವಿಸುವಂತೆ ಮಾಡಿದ ಅಂದಿನ ಡಿವೈಎಸ್‌ಪಿ ಎಂ.ನಾರಾಯಣ್‌ಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.ಡಿವೈಎಸ್‌ಪಿ ನಾರಾಯಣ್‌ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಲು ವೆಂಕಟೇಶ್‌ ಅವರು ನಿರ್ಧರಿಸಿದ್ದಾರೆ. ವೆಂಕಟೇಶ್‌ ಅವರ ಹೋರಾಟಕ್ಕೆ ಶ್ರೀರಾಮ ಸೇನೆ ಬೆಂಬಲ ಘೋಷಿಸಿದೆ. ಪ್ರಕರಣದ ಮತ್ತೆ ತನಿಖೆ ನಡೆದು ನೈಜ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

Via udayavani 

No comments