Breaking News

ಆಳ್ವಾಸ್ ಯುವತಿ ಕಾವ್ಯ ಆತ್ಮಹತ್ಯೆ ಪ್ರಕರಣ : ಕೊಲೆ ಶಂಕೆ !


ಕರಾವಳಿ ಕರ್ನಾಟಕ ವರದಿ
ಮೂಡುಬಿದಿರೆ:  ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ  ನಿಗೂಢವಾಗಿ ಸಾವನ್ನಪ್ಪಿದ್ದು, ಇದೊಂದು ವ್ಯವಸ್ಥಿತ ಕೊಲೆ  ಎಂದು ಪೋಷಕರು ಆರೋಪಿಸಿದ್ದಾರೆ.

ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯಾಗಿದ್ದ ಕಾವ್ಯ(15) ಜುಲೈ 20ರಂದು ಸಂಜೆ ಹಾಸ್ಟೆಲಿನಲ್ಲಿ ತನ್ನ ಕೋಣೆಯಲ್ಲಿ ಸೀರೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಕಾಲೇಜು ಆಡಳಿತ ತಿಳಿಸಿತ್ತು. ಜು.20ರ ಸಂಜೆ 7:30ಗೆ ಘಟನೆ ನಡೆದಿದೆ ಎಂದಿರುವ ಕಾಲೇಜು ಆಡಳಿತ ಮನೆಯವರಿಗೆ 8ಗಂಟೆಗೆ ವಿಷಯ ತಿಳಿಸಿತ್ತು.
ಮುಕ್ಕಾಲು ಗಂಟೆಯಲ್ಲೇ  ಹೆತ್ತವರು ಅಲ್ಲಿಗೆ ತೆರಳುವಷ್ಟರಲ್ಲಿ ವಿದ್ಯಾರ್ಥಿನಿಯ ಶವವನ್ನು ಆಳ್ವಾಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಮೃತದೇಹವನ್ನು ಅವಸರದಲ್ಲಿ ಶವಾಗಾರ ತಲುಪಿಸುವ ಅಗತ್ಯ ಏನಿತ್ತು? ಶವಾಗಾರದಲ್ಲೂ ಮಗಳ ಮೃತದೇಹ ಸರಿಯಾಗಿ ನೋಡಲೂ ಬಿಟ್ಟಿಲ್ಲ. ಮರುದಿನ ಶುಕ್ರವಾರ ಮಧ್ಯಾಹ್ನ ಮೃತದೇಹ ನಮಗೆ ನೀಡಲಾಗಿದೆ ಎಂದು ಕಾವ್ಯ ತಂದೆ ಲೋಕೇಶ್ ಹೇಳಿದ್ದಾರೆ.

ಕಾವ್ಯ ಸಾವಿನ ಪ್ರಕರಣವನ್ನು ಮುಚ್ಚಿ ಹಾಕಲು ಸಂಸ್ಥೆಯ ಆಡಳಿತ ಮಂಡಳಿ ಪ್ರಯತ್ನಿಸುತ್ತಿದೆ. ನಮ್ಮ ಹುಡುಗಿ ಕ್ರೀಡಾಪಟುವಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವಂಥವಳಲ್ಲ. ಆಕೆಯನ್ನು ಶಾಲೆಯವರೇ ಕಿರುಕುಳ ಕೊಟ್ಟು ಕೊಲೆಗೈದಿರುವ ಸಂಶಯ ಇದೆ ಎಂದು ಕಾವ್ಯ ತಾಯಿ ಬೇಬಿ ಆರೋಪಿಸಿದ್ದಾರೆ.
ಕಟೀಲು ಬಳಿಯ ದೇವರಗುಡ್ಡ ಎಂಬಲ್ಲಿನ ನಿವಾಸಿಗಳಾದ ಲೋಕೇಶ್ ಮತ್ತು ಬೇಬಿ ದಂಪತಿಯ ಏಕೈಕ ಪುತ್ರಿಯಾಗಿರುವ ಕಾವ್ಯ ಚಿಕ್ಕಂದಿನಿಂದಲೇ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದಳು. ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿಯೂ ಪಾಲ್ಗೊಂಡಿದ್ದು ಕಟೀಲು ಶಾಲೆಗೆ ಕೀರ್ತಿ ತಂದಿದ್ದಳು. ಅದರಂತೆ ಆಳ್ವಾಸ್ ಹೈಸ್ಕೂಲಿನ ದೈಹಿಕ ಶಿಕ್ಷಕರೇ ಕಾವ್ಯಾ ಹೆತ್ತವರನ್ನು ಸಂಪರ್ಕಿಸಿ, ಶಾಲೆಗೆ ಕಳಿಸಿಕೊಡಿ ಕ್ರೀಡಾ ಕೋಟಾದಲ್ಲಿ ಉಚಿತವಾಗಿ ಶಿಕ್ಷಣ ಕೊಡಿಸುತ್ತೇವೆಂದು ಹೇಳಿ ಕರೆಸಿಕೊಂಡಿದ್ದರು.

ಕಟೀಲು ಶಾಲೆಯಿಂದ ಆಳ್ವಾಸ್ ಹೈಸ್ಕೂಲು ಸೇರಿದ್ದ ಕಾವ್ಯಾ ಇದೀಗ ನಿಗೂಢವಾಗಿ ಸಾವನ್ನಪ್ಪಿರುವುದು ಹೆತ್ತವರನ್ನು ಆತಂಕಕ್ಕೀಡುಮಾಡಿದೆ.

ನಮ್ಮ ಮಗಳಿಗೆ ಆದ ಅನ್ಯಾಯ ಜಗತ್ತಿನ ಯಾವ ಹೆತ್ತವರಿಗೂ ಆಗ ಕೂಡದು ಎಂಬ ಕಾರಣಕ್ಕೆ ಕಾನೂನು ಹೋರಾಟ ಮುನ್ನಡೆಸುವುದಾಗಿ ಮಗಳ ಸಾವಿನಿಂದ ದು:ಖ ತಪ್ತ ತಂದೆ ಲೋಕೇಶ್ ಹೇಳಿದ್ದಾರೆ.
ಆಳ್ವಾಸ್ ಸಂಸ್ಥೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಸಾವಿನ ಬಗ್ಗೆ ಆಕೆಯ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ಪ್ರಕರಣದ ಸೂಕ್ತ ತನಿಖೆ ನಡೆಯಲಿ ಎಂದು ಎಸ್.ಎಫ್.ಐ ದ.ಕ. ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್ ಆಗ್ರಹಿಸಿದ್ದಾರೆ.




No comments