Breaking News

ಫಿನ್‌ಲ್ಯಾಂಡ್‌ಗೆ ಹೊರಟ ಹಳ್ಳಿ ಪೈಲ್ವಾನ್ ಅರ್ಜುನ



ವಿಜಯಪುರ: ತಂದೆ, ದೊಡ್ಡಪ್ಪ ಇಬ್ಬರೂ ಕುಸ್ತಿಪಟುಗಳು. ಅವರಿಗಿಂತ ತಾನೊಂದು ಹೆಜ್ಜೆ ಮುಂದೆ ಹೋಗಬೇಕು ಎಂಬುದು ಬಾಗಲಕೋಟ ತಾಲೂಕಿನ ಬೇವಿನಮಟ್ಟಿಯ ಅರ್ಜುನ ಹಲಕುರ್ಕಿ ಅವರ ಛಲ.

ಆ.1ರಿಂದ 4ರವರೆಗೆ ಫಿನ್‌ಲ್ಯಾಂಡ್‌ನಲ್ಲಿ ನಡೆಯುವ ಕಿರಿಯರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 20 ವರ್ಷದ ಅರ್ಜುನ ಹಲಕುರ್ಕಿ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಚಾಂಪಿಯನ್‌ಷಿಪ್‌ಗೆ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಕುಸ್ತಿಪಟು ಎಂಬ ಹಿರಿಮೆಗೂ ಅರ್ಜುನ ಪಾತ್ರರಾಗಿದ್ದಾರೆ.

ಈ ಹಿಂದೆ 50 ಕೆಜಿ ವಿಭಾಗದಲ್ಲಿ ದೇಶವನ್ನು ಮೂರು ಬಾರಿ ಪ್ರತಿನಿಧಿಸಿರುವ ಅರ್ಜುನ ಈಗ ನಾಲ್ಕನೇ ಬಾರಿ ಅಂತಾರಾಷ್ಟ್ರೀಯ ಟೂರ್ನಿಗೆ ಆಯ್ಕೆಯಾಗಿದ್ದಾರೆ.

ದೊಡ್ಡಪ್ಪ ತುಳಚಪ್ಪ ಅವರ ಆಶಯದಂತೆ ಅರ್ಜುನ ಚಿಕ್ಕ ವಯಸ್ಸಿನಲ್ಲಿಯೇ ಕುಸ್ತಿ ಆಡಲು ಆರಂಭಿಸಿದರು. ಮೊದಲು ಗ್ರಾಮದ ಗರಡಿ ಮನೆಯಲ್ಲಿಯೇ ಕುಸ್ತಿಯ ಪಟ್ಟುಗಳನ್ನು ಕಲಿತ ಅರ್ಜುನ ನಂತರ 5 ರಿಂದ 7ನೇ ತರಗತಿಯವರೆಗೆ ಬಾಗಲಕೋಟದ ಕ್ರೀಡಾ ವಸತಿ ಶಾಲೆಯಲ್ಲಿ ರಾಜು ಫಳಕೆ ಅವರಿಂದ ಮತ್ತಷ್ಟು ಪಟ್ಟು ಕಲಿತು, ದಾವಣಗೇರೆ ಕ್ರೀಡಾ ಶಾಲೆಗೆ ಆಯ್ಕೆಯಾದರು. ಅಲ್ಲಿ ಶಿವಾನಂದ ಅವರಿಂದ ಕುಸ್ತಿಯ ಪಟ್ಟುಗಳನ್ನು ಕಲಿಯುತ್ತಿರುವ ಅರ್ಜುನ ಈಗ ವಿದೇಶಕ್ಕೆ ಹೋಗುತ್ತಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ತಂದೆ ದುರ್ಗಪ್ಪ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ತಾಯಿ ಹನಮವ್ವ, ಹಿರಿಯಣ್ಣ ಪ್ರಕಾಶ ಮನೆ ನೋಡಿಕೊಳ್ಳುತ್ತಿದ್ದು, ಇನ್ನೊಬ್ಬ ಸಹೋದರ ಅಂಗವಿಕಲ. ಸಹೋದರಿ ಪಿಯುಸಿ ಓದುತ್ತಿದ್ದು, ಅರ್ಜುನ ಬಂಗಾರ ಗೆಲ್ಲಲು ಶುಭ ಹಾರೈಸಿಸಿದ್ದಾರೆ.




loading...

No comments