Breaking News

ಮತಾಂತರಗೊಳ್ಳಲು ತೆರಳಿದ ಹಿಂದೂ ಯುವತಿ ,ಚುರುಕುಗೊಂಡ ತನಿಖೆ



ಕಾಸರಗೋಡು : ತಂದೆ, ತಾಯಿಗೆ ಹದಿನೈದು ಪುಟಗಳ ಪತ್ರ ಬರೆದಿಟ್ಟು ಸ್ನಾತಕೋತ್ತರ ಪದವಿ ಪಡೆದ ಯುವತಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ತೆರಳಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಆಕೆಯ ತಂದೆ ನೀಡಿದ ದೂರಿನಂತೆ ಬೇಕಲ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಉದುಮ ಕರಿಪ್ಪೊಡಿ ಕಣಿಯಂಬಾಡಿ ನಿವಾಸಿ ಆದಿರ(23) ಎಂಬಾಕೆ ಸೋಮವಾರದಿಂದ ನಾಪತ್ತೆಯಾಗಿದ್ದಳು. ಆಸ್ಪತ್ರೆಗೆ ಹೋಗುವುದಾಗಿ ತಿಳಿಸಿ ತೆರಳಿದ್ದು ನಂತರ ತಾಯಿ ಸಹೋದರನಿಗೆ ಫೋನಾಯಿಸಿ, ತನಗೆ ಮನೆಯಲ್ಲಿ ಸಮಾಧಾನವಿಲ್ಲ. ಆದ್ದರಿಂದ ತಾನು ತೆರಳುತ್ತಿದ್ದೇನೆ ಎಂದು ಹೇಳಿದ್ದರು. ಬಳಿಕ ಆ ಫೋನ್‌ಗೆ ಮರಳಿ ಕರೆ ಮಾಡಿದರೂ ಆಕೆ ಕರೆ ಸ್ವೀಕರಿಸಿಲ್ಲ.

ಮನೆಯವರು ಆದಿರಾಳ ಕೊಠಡಿಯನ್ನು ತಪಾಸಣೆಗೈದಾಗ ಆದಿರಾ ಬರೆದಿಟ್ಟ ಪತ್ರ ಪತ್ತೆಯಾಗಿದೆ. ಶಾಲೆ ಶಿಕ್ಷಣದಿಂದ ಸ್ನಾತಕೋತ್ತರ ಪದವಿವರೆಗಿನ ಪ್ರತೀ ವಿಷಯಗಳನ್ನು ಪತ್ರದಲ್ಲಿ ವಿವರವಾಗಿ ಉಲ್ಲೇಖಿಸಲಾಗಿದೆ. ಈ ಮಧ್ಯೆ ಧಾರ್ಮಿಕವಾಗಿ ಉಂಟಾದ ಬದಲಾವಣೆ, ವಿವಿಧ ಧರ್ಮಗಳ ಕುರಿತಾದ ವಿಮರ್ಶೆಗಳನ್ನು ಪತ್ರದಲ್ಲಿ ಬರೆಯಲಾಗಿದೆ. ಈ ಪತ್ರವನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಪತ್ರದ ಬರಹಗಳನ್ನು ಅವಲೋಕಿಸಿದಾಗ ಆದಿರಾಳಿಗೆ ಧರ್ಮದ ಕುರಿತು ಸಮಗ್ರ ಶಿಕ್ಷಣ ಲಭಿಸಿರುವುದು ಖಚಿತಗೊಳ್ಳುತ್ತಿದೆಯೆಂದು ಪೊಲೀಸ್ ಮೂಲಗಳು ತಿಳಿಸುತ್ತಿವೆ. “ಇಸ್ಲಾಂ ಧರ್ಮದ ಕುರಿತು ಕಲಿಯಲು ಸ್ವಂತ ಇಷ್ಟದಂತೆ ತೆರಳುತ್ತಿದ್ದೇನೆ. ತಂದೆ, ತಾಯಿಗೆ ನೋವುಂಟು ಮಾಡಲು ಇಷ್ಟವಿಲ್ಲ. ತಾನು ಧಾರ್ಮಿಕ ಅಧ್ಯಯನದ ಬಳಿಕ ಮರಳಿ ಬರುವೆನು. ನೀವೂ ನಮ್ಮ ದಾರಿಯಲ್ಲೇ ಸಾಗಬೇಕು. ಸ್ನೇಹ ಪೂರ್ವಕ ಆದಿರಾ” ಎಂಬುದಾಗಿ ಮಲೆಯಾಳದಲ್ಲಿ ಪತ್ರ ಬರೆಯಲಾಗಿದೆ. ಆದಿರಾಳ ತಂದೆ ನೀಡಿದ ದೂರಿನ ಮೇರೆಗೆ ಸೈಬರ್ ಸೆಲ್‌ನ ಸಹಾಯ ದೊಂದಿಗೆ ಪೊಲೀಸ್ ತನಿಖೆ ಆರಂಭ ಗೊಂಡಿದೆ. ನಿನ್ನೆ ಸಂಜೆ ವೇಳೆಗೆ ಆದಿರಾಳ ಮೊಬೈಲ್ ಫೋನ್ ವಳಪಟ್ಟಣ ಟವರ್ ವ್ಯಾಪ್ತಿಯಲ್ಲಿದ್ದು, ಬಳಿಕ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

No comments