ಮಠ ,ದೇವಸ್ಥಾನಗಳಲ್ಲಿ ಇಫ್ತಾರ್ ಕೂಟಗಳನ್ನು ನಡೆಸಿದರೆ ರಕ್ತಪಾತವಾಗುತ್ತದೆ : ಮುತಾಲಿಕ್
ಬೆಂಗಳೂರು : ಶ್ರೀಕೃಷ್ಣಮಠದಲ್ಲಿ ಪೇಜಾವರಶ್ರೀಗಳು ಇಫ್ತಾರ್ ಕೂಟ ಮತ್ತು ನಮಾಜ್ ಆಯೋಜಿಸಿದನ್ನು ಖಂಡಿಸಿ ಬೆಂಗಳೂರಿನಲ್ಲಿ ಇಂದು ರಾಮಸೇನಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು . ಮುಂದಿನ ದಿನಗಳಲ್ಲಿ ಕೃಷ್ಣಮಠ, ದೇವಸ್ಥಾನಗಳಲ್ಲಿ ಇಫ್ತಾರ್ ಕೂಟಗಳನ್ನು ನಡೆಸಿದರೆ ರಕ್ತಪಾತವಾಗುತ್ತದೆ. ನಮ್ಮ ರಕ್ತ ಚೆಲ್ಲಿದರೂ ಚಿಂತೆಯಿಲ್ಲ. ಕೃಷ್ಣಮಠ, ದೇವಸ್ಥಾನಗಳಲ್ಲಿ ಇಫ್ತಾರ್ ಕೂಟ ನಡೆಸಲು ಬಿಡುವುದಿಲ್ಲ ಎಂದು ಶಿವರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರತಿಭಟನೆಯಲ್ಲಿ ಗುಡುಗಿದರು.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ನಡೆಸಿದ್ದನ್ನು ವಿರೋಧಿಸಿ ನಗರದ ಶೇಷಾದ್ರಿ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆ ಬಳಿ ಶ್ರೀರಾಮಸೇನೆಯ ನೂರಾರು ಕಾರ್ಯಕರ್ತರೊಂದಿಗೆ ಪ್ರತಿಭಟನಾ ಧರಣಿ ನಡೆಸಿದ ಪ್ರಮೋದ್ ಮುತಾಲಿಕ್ ಅವರು, ಪೇಜಾವರ ಶ್ರೀಗಳ ವಿರುದ್ಧ ನಾವು ಹೋರಾಟ ನಡೆಸುತ್ತಿಲ್ಲ. ಇಫ್ತಾರ್ ಕೂಟ ಏರ್ಪಡಿಸಿದ ಸ್ಥಳದ ಬಗ್ಗೆ ನಮ್ಮ ಹೋರಾಟ ಎಂದರು.
ಮಠ, ದೇವಸ್ಥಾನಗಳಲ್ಲಿ ಇಫ್ತಾರ್ ಕೂಟ ಆಯೋಜನೆಯಿಂದ ಹಿಂದೂ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಸಾವಿರಾರು ವರ್ಷಗಳಿಂದ ಎಲ್ಲರಲ್ಲೂ ದೇವರು ಇದ್ದಾನೆ. ಸೌಹಾರ್ದತೆಯಿಂದ ಇರುವ ಧರ್ಮ ಹಿಂದೂ ಧರ್ಮ ಎಂದರು.
ಹಿಂದೂ ಧರ್ಮಕ್ಕೆ ಶಾಂತಿಯ ಪಾಠ ಹೇಳಿಕೊಡುವ ಅಗತ್ಯವಿಲ್ಲ. ಇಡೀ ಜಗತ್ತಿನ ಶಾಂತಿ ಹೆಸರಿನಲ್ಲಿ ಗೋ ಹತ್ಯೆ, ಭಯೋತ್ಪಾದನೆ, ಅತ್ಯಾಚಾರ ಮಾಡುತ್ತಿರುವವರು ಯಾರು? ಅಂತಹ ಸಮುದಾಯಕ್ಕೆ ಶಾಂತಿಯ ಪಾಠ ಹೇಳಿಕೊಡಿ ಎಂದು ಅವರು ಹರಿಹಾಯ್ದರು.
ಗೋ ರಕ್ಷಕರು ಜೈಲಿನಲ್ಲಿದ್ದಾರೆ. ಗೋ ಭಕ್ಷಕರು ಹೊರಗಡೆ ಇದ್ದಾರೆ. ಮೈಸೂರಿನಲ್ಲಿ ಬಹಿರಂಗವಾಗಿಯೇ ಗೋ ಮಾಂಸ ತಿಂದ ಸಾಹಿತಿ ಭಗವಾನ್‌ರವರನ್ನು ಸರ್ಕಾರ ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರಚಾರಕ್ಕೆ ನಾವು ಹೋರಾಟ ನಡೆಸುತ್ತಿಲ್ಲ. ಪೇಜಾವರ ಶ್ರೀಗಳ ವಿರುದ್ಧವೂ ನಮ್ಮ ಹೋರಾಟವಲ್ಲ, ಅವರ ನಡೆ ಆಕ್ಷೇಪಾರ್ಹ. ಇಫ್ತಾರ್ ಕೂಟ ನಡೆಸಿದ ಸ್ಥಳದ ಬಗ್ಗೆ ನಮ್ಮ ತಕರಾರು ಎಂದು ಅವರು ಹೇಳಿದರು.
No comments