Breaking News

ಜೈಲು ಬಿಟ್ಟು ಮಾಲ್ ಗೆ ಹೊದ ಶಶಿಕಲಾ ? ಪರಪ್ಪನ ಅಗ್ರಹಾರದಲ್ಲಿ ನಡೆದಿತೆ ಬ್ರಹ್ಮಾಂಡದ ಭ್ರಷ್ಟಾಚಾರ?



ಬೆಂಗಳೂರು, ಆ. ೨೧- ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲುವಾಸಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ, ಜೈಲಿನಲ್ಲಿದ್ದರೂ ರಾಜಾರೋಷವಾಗಿ ಹೊರಗಡೆ ತಿರುಗಾಡುತ್ತಿರುವುದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಭ್ರಷ್ಟತೆಗೆ ಕನ್ನಡಿ ಹಿಡಿದಂತಾಗಿದೆ.

* ಜೈಲಿನಿಂದ ಹೊರಗೆ ಹೋಗಿ ಬಂದಿರುವ ಶಶಿಕಲಾ.
* ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆ.
* ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಭ್ರಷ್ಟಾಚಾರಕ್ಕೆ ಕೈಗನ್ನಡಿ.
* ಕೈದಿಗಳು ಧರಿಸುವ ಸಮವಸ್ತ್ರಕ್ಕೆ  ಶಶಿಕಲಾ ಗುಡ್ ಬೈ.
* ಇಳವರಸಿ ಜೊತೆ ಬಿಂದಾಸ್ ಆಗಿ ಓಡಾಡುತ್ತಿರುವ ಶಶಿಕಲಾ.
* ದಾಖಲೆ ಸಮೇತ ಸಿಸಿಟಿವಿ ಹೇಳಿಕೆ ನೀಡಿರುವ ಡಿ. ರೂಪಾ.
* ಸತ್ಯನಾರಾಯಣ ರಾವ್ ವಿರುದ್ಧ ಮಾಡಿದ್ದ ಆರೋಪಕ್ಕೆ ಪುಷ್ಠಿ ಒದಗಿಸಿದ ಸಾಕ್ಷಿ.
ಕೈದಿಗಳಿಗೆ ನೀಡುವ ಸಮವಸ್ತ್ರಕ್ಕೆ ಶಶಿಕಲಾ ಗುಡ್ ಬೈ ಹೇಳಿ ಸಾಮಾನ್ಯ ಧಿರಿಸಿನಲ್ಲಿ ಜೈಲಿನಲ್ಲಿ ಬಿಂದಾಸ್ ಆಗಿ ಓಡಾಡುತ್ತಿರುವುದೂ ಅಲ್ಲದೆ  ಜೈಲಿನ ಮುಖ್ಯದ್ವಾರದಿಂದ ಗೆಳತಿ ಇಳವರಸಿ ಜೊತೆ ಹೊರಗೆ ಹೋಗಿ ಬಂದಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ಸಿಡಿ ಭ್ರಷ್ಟಾಚಾರ ನಿಗ್ರಹ ದಳ ಎಸಿಬಿಯ ಕೈಸೇರಿದೆ.

ಶಶಿಕಲಾ ಜೈಲಿನಲ್ಲೂ ದರ್ಬಾರ್ ಮಾಡುತ್ತಿರುವುದಕ್ಕೆ ಸಿಸಿಟಿವಿ ದೃಶ್ಯ ಸಾಕ್ಷಿ ಒದಗಿಸಿದಂತಿದೆ. ಕಾರಾಗೃಹ ಇಲಾಖೆಯ ಡಿಐಜಿ ಆಗಿದ್ದ ಡಿ. ರೂಪಾ ಕೇಂದ್ರ ಕಾರಾಗೃಹದಲ್ಲಿ ಶಶಿಕಲಾ ಹಾಗೂ ಮತ್ತಿತರರು ನಡೆಸುತ್ತಿದ್ದ ದರ್ಬಾರ್ ಬಗ್ಗೆ ನೀಡಿದ್ದ ವರದಿಗೆ ಇದು ಪುಷ್ಠಿ ನೀಡಿದಂತಾಗಿದೆ

ಶಶಿಕಲಾ ಅವರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜಾತೀತ್ಯ ನೀಡಲಾಗುತ್ತಿದೆ ಎನ್ನುವ ವಿಷಯ ಕಾರಾಗೃಹ ಇಲಾಖೆಯಲ್ಲಿನ ಹಿರಿಯ ಪೊಲೀಸ್ ಅಧಿಕಾರಿಗಳ ವಾಕ್ಸಮರಕ್ಕೆ ವೇದಿಕೆಯಾಗಿತ್ತು, ಇದರಿಂದ ಮುಜುಗರಕ್ಕೆ ಒಳಗಾದ ರಾಜ್ಯ ಸರ್ಕಾರ, ಇಬ್ಬರು ಅಧಿಕಾರಿಗಳನ್ನು ಎತ್ತಂಗಡಿ ಮಾಡಿ, ನಿವೃತ್ತ ಐಎ‌ಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿತ್ತು.

ಜುಲೈ 31 ರಂದು ಎಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದ ಹಾಲಿ ರಸ್ತೆ ಮತ್ತು ಸುರಕ್ಷತೆ ವಿಭಾಗದ ಆಯುಕ್ತೆಯಾಗಿರುವ ಡಿ. ರೂಪಾ ಜೈಲಿನ ಅಕ್ರಮಗಳ ಬಗ್ಗೆ  ಎಸಿಬಿಗೆ ಸಿಡಿ ಸೇರಿದಂತೆ 74 ದಾಖಲೆಗಳನ್ನು ಸಲ್ಲಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಶಶಿಕಲಾ ಮತ್ತು ಇಳವರಸಿ ಸಾಮಾನ್ಯ ಧಿರಿಸಿನಲ್ಲಿ ಜೈಲಿನಿಂದ ಹೊರಗೆ ಹೋಗಿ ಒಳ ಬರುತ್ತಿರುವ ದೃಶ್ಯ ದಾಖಲಾಗಿದ್ದು, ಅದನ್ನು ಭ್ರಷ್ಟಾಚಾರ ನಿಗ್ರಹ ದಳ ಮತ್ತು ವಿಚಾರಣೆ ನಡೆಸುತ್ತಿರುವ ವಿನಯ್ ಕುಮಾರ್ ನೇತೃತ್ವದ ಆಯೋಗಕ್ಕೆ ಹಿರಿಯ ಪೊಲೀಸ್ ಅಧಿಕಾರಿ ಡಿ. ರೂಪಾ ಸಲ್ಲಿಸಿದ್ದಾರೆ.

ಶಶಿಕಲಾ ಮತ್ತು ಇಳವರಸಿ ಹೊರಗಡೆಯಿಂದ ಬ್ಯಾಗ್ ಹಿಡಿದುಕೊಂಡು ಬರುವಾಗ ಪುರುಷ ಭದ್ರತಾ ಸಿಬ್ಬಂದಿ ಅವರೊಂದಿಗೆ ಒಳಗೆ ಬರುತ್ತಿರುವ ಸಿಸಿಟಿವಿಯ ದೃಶ್ಯಾವಳಿಗಳನ್ನು ಎಸಿಬಿ ಅಧಿಕಾರಿಗಳಿಗೆ ದಾಖಲೆ ಸಮೇತ ಸಲ್ಲಿಸಿರುವುದಾಗಿ ಡಿ. ರೂಪಾ ಖಚಿತಪಡಿಸಿದ್ದಾರೆ.

ಮಹಿಳಾ ಕೈದಿಗಳಿರುವ ಬ್ಯಾರಕ್‌ನಲ್ಲಿ ಪುರುಷ ಭದ್ರತಾ ಸಿಬ್ಬಂದಿಗೆ ಅವಕಾಶವಿಲ್ಲ. ಹಾಗಿದ್ದರೂ ಅವರ ಬ್ಯಾರಕ್ ಬಳಿ ಪುರುಷ ಭದ್ರತಾ ಸಿಬ್ಬಂದಿಯನ್ನು ನಿಯೋಜನೆಗೆ ನೇಮಿಸಿಕೊಳ್ಳಲಾಗಿದೆ. ಇದರ ಜೊತೆಗೆ ಶಶಿಕಲಾ ಅವರನ್ನು ಭೇಟಿ ಮಾಡಲು ಬರುವವರಿಗೆ ಪ್ರತ್ಯೇಕ ಕೊಠಡಿ ಸೇರಿದಂತೆ, ಇನ್ನಿತರ ವಿಶೇಷ ಸೌಲಭ್ಯ ಕಲ್ಪಿಸಿರುವುದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದಕ್ಕೆ ತಾಜಾ ನಿದರ್ಶನವಾಗಿದೆ.

ಬುರ್ಖಾ ಧರಿಸಿ ಶಾಂಪಿಂಗ್

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಶಶಿಕಲಾ ಮತ್ತು ಇಳವರಸಿ ಬುರ್ಖಾ ಧರಿಸಿ ಎಂ.ಜಿ. ರಸ್ತೆಯಲ್ಲಿ ಶಾಂಪಿಂಗ್ ಮಾಡಿರುವ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ. ಜೈಲಿನ ಅಧಿಕಾರಿಗಳೇ ಶಶಿಕಲಾ ಮತ್ತು ಇಳವರಸಿಗೆ ಹೊರಗೆ ಹೋಗಲು ಅವಕಾಶ ನೀಡಿದ್ದಾರೆ ಎನ್ನುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದುಡ್ಡು ಕೊಟ್ಟರೆ ಎಲ್ಲವೂ ನಡೆಯಲಿದೆ ಎನ್ನುವುದು ತಾಜಾ ನಿದರ್ಶನವಾಗಿದೆ.

Source: online

No comments