ಕಟೀಲು ಶ್ರೀ ದೇವಿಯ ನಿಂದನೆ, ಆರೋಪಿ ಡರ್ವೀಜ್ ಮೊಹಿದೀನ್(ಜಬ್ಬಾರ್ ಬಿಸಿರೋಡ್) ಬಂಧನ.
ಮಂಗಳೂರು : ನಕಲಿ ಫೇಸ್ಬುಕ್ ಖಾತೆಯ ಮೂಲಕ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಹಾಗೂ ಸೀತಾ ಮಾತೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಬರಹ ಪ್ರಕಟಿಸುತ್ತಿದ್ದ ಯುವಕನನ್ನು ಪೋಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಡರ್ವೀಜ್ ಮೊಹಿದೀನ್(27) ಎಂದು ಗುರುತಿಸಲಾಗಿದ್ದು, ಮುಂಬೈಯ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಅಧಿಕಾರಿಗಳು ಬಂಧನಕ್ಕೆ ಒಳಪಡಿಸಿದ್ದಾರೆ.
ಆರೋಪಿ ಡರ್ವೀಜ್ ಮೊಹಿದೀನ್ |
ಜಬ್ಬಾರ್ ಬಿ.ಸಿ ರೋಡ್ ಎಂಬ ನಕಲಿ ಫೇಸ್ಬುಕ್ ಖಾತೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸೀತಾಮಾತೆ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಬಗ್ಗೆ ಅವಹೇಳನಕಾರಿ ಬರಹಗಳನ್ನು ಪ್ರಕಟಿಸಲಾಗುತ್ತಿತ್ತು. ಈ ಸಂಬಂಧ ಮಂಗಳೂರು ಉತ್ತರ ವಲಯದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಸಂಬಂಧ ತನಿಖೆ ಕೈಗೆತ್ತಿಕೊಂಡಿದ್ದ ಪೋಲೀಸರು ನಕಲಿ ಖಾತೆ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕಲಂದರ್ ಶಫಿ ಬಿಎಮ್ ಹಾಗೂ ಡರ್ವೀಜ್ ಮೊಹಿದಿನ್ ಕೈವಾಡವನ್ನು ಪತ್ತೆ ಹಚ್ಚಿತ್ತು. ಆದರೆ ಆರೋಪಿಗಳಿಬ್ಬರು ವಿದೇಶದಲ್ಲಿ ನೆಲೆಸಿದ್ದರಿಂದ ಅವರ ಮೇಲೆ ಲುಕೌಟ್ ನೋಟೀಸ್ ಜಾರಿಗೊಳಿಸಲಾಗಿತ್ತು.
ಶಫಿ ಬಿಎಮ್ |
ಇದರಲ್ಲಿ ಆರೋಪಿ ಶಫಿ ಬಿಎಮ್ ನನ್ನು ಕಳೆದ ವರ್ಷ ಅಕ್ಟೋಬರ್ 9ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಈ ಶಫಿ ಬಿಎಮ್ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಯುವತಿಯೊಬ್ಬಳನ್ನು ಮಾನಹಾನಿ ಮಾಡಿದ ಬಗ್ಗೆಯೂ ಪ್ರಕರಣ ದಾಖಲಾಗಿತ್ತು. ಬಂಧನದ ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗಟ್ಟಲಾಗಿತ್ತು.
ಈಗ ಇನ್ನೊಬ್ಬ ಆರೋಪಿ ಡರ್ವೀಜ್ ನ ಬಂಧನವಾಗಿದೆ. ಆರೋಪಿಯ ಬಂಧನದ ವಿಷಯ ತಿಳಿದ ಮಂಗಳೂರು ಪೋಲೀಸರು ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲು ಮುಂಬೈ ತೆರಳಿದ್ದಾರೆ.
No comments