Breaking News

ಡಿಕೆ ಶಿವಕುಮಾರ್ ಮೇಲಿನ ಐಟಿ ದಾಳಿ ಕಾಂಗ್ರೆಸ್ ನಡೆಸಿದ ತಂತ್ರವೇ !?


ಬೆಂಗಳೂರು: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸಾಮ್ರಾಜ್ಯದ ಮೇಲಿನ ಐಟಿ ದಾಳಿ ಬಳಿಕ ರಾಜ್ಯ ಸರ್ಕಾರದ ಆಡಳಿತ ವೈಖರಿ ವಿರುದ್ಧ ಆಡಳಿತ ಯಂತ್ರವೇ ತಿರುಗಿಬಿದ್ದಿದೆಯೇ ಎಂಬ ಸಂಶಯ ದಟ್ಟವಾಗುತ್ತಿದೆ.
ರಾಜ್ಯಾದ್ಯಂತ 60ಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭರ್ಜರಿ ದಾಳಿಗೆ ತಯಾರಿ ನಡೆಸಿದ್ದರೂ, ರಾಜ್ಯ ಸರ್ಕಾರಕ್ಕೆ ಇದರ ಅಂದಾಜು ಸಿಗದಿರುವುದು ಆಶ್ಚರ್ಯ ಮೂಡಿಸಿದೆ. ರಾಜ್ಯ ಪೊಲೀಸ್ ವ್ಯವಸ್ಥೆಯಲ್ಲಿ ಸರ್ಕಾರದ ದುರಾಡಳಿತವೇ ಡಿಕೆಶಿ ಸಾಮ್ರಾಜ್ಯ ಹಾಗೂ ಕಾಂಗ್ರೆಸ್​ನಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಕಂಪನವಾಗಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಬದಲಾದ ಆಡಳಿತ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಕಾರ್ಯವೈಖರಿಯೂ ಸಂಪೂರ್ಣವಾಗಿ ಬದಲಾಗಿದೆ. ಆದರೆ ರಾಜ್ಯದಲ್ಲಿನ ಗುಪ್ತಚರ ವಿಭಾಗದ ಕಣ್ತಪ್ಪಿಸಿ ಡಿ.ಕೆ. ಶಿವಕುಮಾರ್ ಅವರನ್ನು ಹೀಗೆ ಕಟ್ಟಿಹಾಕಲು ಸಾಧ್ಯವಾಗಿದ್ದು ಹೇಗೆಂಬ ಪ್ರಶ್ನೆ ಮೂಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ ಸರ್ಕಾರವು ಗೃಹ ಇಲಾಖೆಯನ್ನು ನಡೆಸಿಕೊಂಡಿರುವುದಕ್ಕೆ ಇದು ಪ್ರತಿಫಲ ಎನ್ನಲಾಗಿದೆ.
ಮತ್ತೊಂದೆಡೆ ಸರ್ಕಾರಕ್ಕೆ ಮಾಹಿತಿ ಇದ್ದರೂ ರಾಜಕೀಯವಾಗಿ ಹಣಿಯುವ ಉದ್ದೇಶದಿಂದಲೇ ಡಿಕೆಶಿಯನ್ನು ಕತ್ತಲಲ್ಲಿಡಲಾಗಿತ್ತೇ ಎಂಬ ಅಭಿಪ್ರಾಯವೂ ಇದೆ.
ಮೊದಲೇ ಮಾಹಿತಿ ಇತ್ತು!: ಕಾಂಗ್ರೆಸ್​ನ ಉನ್ನತ ಮೂಲಗಳು ತಿಳಿಸಿದಂತೆ ಐಟಿ ದಾಳಿ ಬಗ್ಗೆ ಕಾಂಗ್ರೆಸ್​ನ ಬಹುತೇಕ ಸಚಿವರಿಗೆ ಮಾಹಿತಿ ಇತ್ತು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ದಾಳಿಯ ಮುನ್ಸೂಚನೆಯನ್ನು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ನೀಡಿದ್ದರು. ಬಿಜೆಪಿಗೆ ಉಳಿದಿರುವುದು ಇದೊಂದೆ ತಂತ್ರವಾಗಿದೆ. ಎಲ್ಲರೂ ಎಚ್ಚರಿಕೆಯಿಂದ ಇರಬೇಕೆಂದು ಹೇಳಿದ್ದರೆನ್ನಲಾಗಿದೆ. ಆದರೆ ಒಂದೇ ಬಾರಿಗೆ 64 ಕಡೆ ದಾಳಿ ಮಾಡಿ ನಡುಕ ಹುಟ್ಟಿಸುತ್ತಾರೆ ಎಂದು ಕನಸಿನಲ್ಲೂ ಎಣಿಸಿರಲಿಲ್ಲವಂತೆ. ಹಾಗೆಯೇ ಗುಜರಾತ್ ಚುನಾವಣೆ ಮುಗಿಯುವವರೆಗೆ ದಾಳಿ ನಡೆಸದಿರಬಹುದು ಎಂದು ಅಂದಾಜು ಮಾಡಲಾಗಿತ್ತು. ಇದೇ ವಿಚಾರವನ್ನು ಮೊದಲು ತಿಳಿಸಿಲ್ಲ ಎನ್ನುವುದು ಗುಪ್ತಚರ ಇಲಾಖೆ ಮೇಲೆ ಕಾಂಗ್ರೆಸಿಗರ ಕೋಪವಾಗಿದೆ.

ಡಿ.ಕೆ.ಶಿವಕುಮಾರ್ ಸಾಮ್ರಾಜ್ಯದ ಮೇಲೆ ನಡೆದ ಐಟಿ ಕಾರ್ಯಾಚರಣೆ ವೇಳೆ ಪತ್ತೆಯಾದ ಡೈರಿ ಹಾಗೂ ದಾಖಲೆಗಳಲ್ಲಿ ಎಐಸಿಸಿ ಸೇರಿದಂತೆ ದೇಶದ ಹಲವು ಪ್ರಭಾವಿಗಳಿಗೆ ಕಪ್ಪ ಕಾಣಿಕೆ ಸಂದಾಯವಾಗಿರುವ ಸ್ಪೋಟಕ ಮಾಹಿತಿ ಇದೆ ಎಂದು ಟೈಮ್್ಸ ನೌ ಸುದ್ದಿವಾಹಿನಿ ವರದಿ ಮಾಡಿದೆ.
ಎರಡೂವರೆ ವರ್ಷದ ಬಳಿಕ ಸಚಿವರಾದಾಗ ಹಾಗೂ ಕೆಪಿಸಿಸಿ ಪಟ್ಟ ತಪ್ಪಿದ ಸಂದರ್ಭದಲ್ಲೂ ಡಿಕೆಶಿ ವಿರುದ್ಧ ಇದೇ ತಂಡ ಕೆಲಸ ಮಾಡಿತ್ತೆನ್ನುವುದನ್ನು ಕಾಂಗ್ರೆಸ್​ನ ಪ್ರತಿಯೊಬ್ಬ ನಾಯಕರೂ ಒಪು್ಪತ್ತಾರೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್​ನ ಬಹುತೇಕ ಹಿರಿಯ ನಾಯಕರಿಗೆ ಡಿಕೆಶಿ ಕಂಟಕವಾಗಿದ್ದರು. ಮುಂದೊಂದು ದಿನ ಮುಖ್ಯಮಂತ್ರಿಯಾಗಬಲ್ಲ ಅಭ್ಯರ್ಥಿ ಎನ್ನುವುದೇ ಇವರ ಕಣ್ಣು ಕೆಂಪಾಗುವುದಕ್ಕೆ ಕಾರಣವಾಗಿತ್ತು. ಈ ಸಂದರ್ಭವನ್ನು ಉತ್ತಮವಾಗಿ ಬಳಸಿಕೊಂಡ ಸಿದ್ದರಾಮಯ್ಯ ಹಾಗೂ ಇತರರು ಐಟಿ ದಾಳಿ ಸಂದರ್ಭದ ಮೂಲಕ ಡಿಕೆಶಿ ಕಟ್ಟಿಹಾಕಲು ಯಶಸ್ವಿಯಾದರೆಂಬ ಆರೋಪ ಡಿಕೆಶಿ ಆಪ್ತವಲಯದಲ್ಲೇ ಕೇಳಿಬರುತ್ತಿದೆ.

ಮತ್ತೊಂದೆಡೆ ಸಿಆರ್​ಪಿಎಫ್ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ 60 ಕಡೆಗಳಲ್ಲಿ ಕಾರ್ಯಾಚರಿಸುತ್ತಿರುವ ವಿಚಾರ ಸರ್ಕಾರದ ಗಮನಕ್ಕೆ ಬಾರದಿರುವುದರ ಹಿಂದೆ ಜಾಣ ಕುರುಡು ಧೋರಣೆ ಇರಬಹುದೆಂಬ ವ್ಯಾಖ್ಯಾನವೂ ಕೇಳಿಬರುತ್ತಿದೆ. ಕಾಂಗ್ರೆಸ್ ಪಾಳಯದಲ್ಲಿ ಡಿಕೆಶಿ ವಿರೋಧಿಸುವ ದೊಡ್ಡ ತಂಡವೇ ಇದ್ದು, ರಾಜಕೀಯವಾಗಿ ಹಣಿಯಲು ಹವಣಿಸುತ್ತಿದೆ. ಐಟಿ ದಾಳಿ ಸಂದರ್ಭವನ್ನು ಸರಿಯಾಗಿ ಬಳಸಿಕೊಂಡ ಸರ್ಕಾರ, ಡಿಕೆಶಿಯನ್ನು ಈ ವಿಚಾರದಲ್ಲಿ ಕತ್ತಲಲ್ಲಿ ಇಟ್ಟಿರಬಹುದೆನ್ನಲಾಗುತ್ತಿದೆ. ಈ ಹಿಂದೆ ಡಿಕೆಶಿ ಅವರೇ ಬಹಿರಂಗವಾಗಿ ‘ನನಗೆ ಒಳಗೆ, ಹೊರಗೆ ಶತ್ರುಗಳಿದ್ದಾರೆ. ಆದರೆ ಇದನ್ನು ನಿರ್ವಹಿಸುವ ಚಾಕಚಕ್ಯತೆಯನ್ನು ಭಗವಂತ ಕರುಣಿಸಿದ್ದಾನೆ’ ಎನ್ನುವ ಮೂಲಕ ಪಕ್ಷದೊಳಗಿನ ವೈರಿಗಳ ವಿರುದ್ಧ ಬಹಿರಂಗವಾಗಿ ಗುಡುಗಿದ್ದರು.

Source : PTI

No comments