ಈದ್ಗಾ ಮೈದಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಿ: ಸಿಟಿ ರವಿ
ಬೆಂಗಳೂರು: ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಬಳಿಯಿರುವ ರಾಮೇಶ್ವರ ದೇಗುಲದ ಗೋಡೆಯನ್ನು ಕೆಡವಿರುವ ಸರ್ಕಾರದ ನಡೆಯ ಕುರಿತು ಸಾಲು ಸಾಲು ಟ್ವೀಟ್ ಮಾಡಿರುವ ಸಿ.ಟಿ.ರವಿ ಸಿದ್ದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜಾತ್ಯತೀತತೆಯ ಪ್ರಕಾರ ಇಂದಿರಾ ಕ್ಯಾಂಟೀನ್ ಗಾಗಿ ದೇವಾಲಯದ ಗೋಡೆಯನ್ನು ಕೆಡಹುವುದಕ್ಕೆ ಅಭ್ಯಂತರವಿಲ್ಲ, ಆದರೆ ಖಾಲಿ ಇರುವ ಈದ್ಗಾ ಮೈದಾನವನ್ನು ಮಾತ್ರ ಮುಟ್ಟುವಂತಿಲ್ಲ ಎಂದು ಚಿಕ್ಕಮಗಳೂರು ಶಾಸಕ ಸಿ ಟಿ ರವಿ ತಿರುಗೇಟು ನೀಡಿದ್ದಾರೆ.
ಇಂದಿರಾ ಕ್ಯಾಂಟೀನ್ ಗಾಗಿ ಬೆಂಗಳೂರಿನ
ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಬಳಿಯಿರುವ ರಾಮೇಶ್ವರ ದೇಗುಲದ ಗೋಡೆಯನ್ನು ಜುಲೈ 31ರ ರಾತ್ರಿಯೇ ಕೆಡವಲಾಗಿದೆ, ಹಳೆಯ ಮರಗಳನ್ನು ಕೂಡ ಕತ್ತರಿಸಲಾಗಿದೆ. ಬಡವರಿಗೆ ಕಡಿಮೆ ಬೆಲೆಯಲ್ಲಿ ಊಟ ಒದಗಿಸುವ 'ಇಂದಿರಾ ಕ್ಯಾಂಟೀನ್' ತೆರೆಯುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಾಗಿ ಈ ಸ್ಥಳವನ್ನು ಬಳಸಿಕೊಳ್ಳಲಾಗುತ್ತಿದೆ.
ಐತಿಹಾಸಿಕ ಹೆಗ್ಗುರುತಾಗಿರುವ 300 ವರ್ಷ ಪುರಾತನ ಹಿಂದೂ ಮಂದಿರದ ಆವರಣದಲ್ಲಿ 'ಇಂದಿರಾ ಕ್ಯಾಂಟೀನ್' ಏಕೆ ನಿರ್ಮಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯ ಅವರ ಮೇಲೆ ಮಾಜಿ ಬಿಬಿಎಂಪಿ ಸದಸ್ಯ ಚಂದ್ರಶೇಖರ್ ಹಲ್ಲೆಗೆ ಯತ್ನಿಸಿದ ಗಲಾಟೆಯ ಬೆನ್ನಲ್ಲೇ ಸಿ ಟಿ ರವಿ ನೀಡಿರುವ ಈ ಹೇಳಿಕೆಗೆ ಹಿಂದುಪರ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ತಿಳಿದು ಬಂದಿದೆ.
No comments