Breaking News

ಇಂದಿರಾ ಕ್ಯಾಂಟೀನ್‌ಗೆ ಮುಗಿ ಬಿದ್ದ ಜನ ಅರ್ಧ ಗಂಟೆಯಲ್ಲೇ ತಿಂಡಿ ಖಾಲಿ




 ಬೆಂಗಳೂರು: ನಗರದ 101 ಕಡೆಗಳಲ್ಲಿ ‘ಇಂದಿರಾ ಕ್ಯಾಂಟೀನ್‌’ಗಳು ಆರಂಭವಾಗಿದ್ದು, 5 ರೂ.ಗೆ ಬೆಳಿಗ್ಗಿನ ಉಪಹಾರ ಪಡೆಯಲು ನೂಕುನುಗ್ಗಲು ಉಂಟಾಗಿದೆ. ಹೆಚ್ಚಿನ ಕ್ಯಾಂಟೀನ್‌ಗಳಲ್ಲಿ ಆರಂಭವಾದ ಅರ್ಧ ಗಂಟೆಗಳಿಗೆ ಉಪಹಾರ ಮುಗಿದು ಜನರು ನಿರಾಶರಾಗಿ ಮರಳಿದ್ದಾರೆ. ಕೆಲ ಇಂದಿರಾ ಕ್ಯಾಂಟೀನ್‌ಗಳಲ್ಲಿ ಇಂದು ಬೆಳಿಗ್ಗೆ 5 ರೂ.ಗೆ ರವೆ ಉಪ್ಪಿಟ್ಟು, ಕೇಸರಿಬಾತು ನೀಡಿದ್ದರೆ, ಮತ್ತೆ ಕೆಲವು ಕ್ಯಾಂಟೀನ್‌ಗಳಲ್ಲಿ ಇಡ್ಲಿ ಮತ್ತು ಟಮೋಟೊ ಬಾತ್‌ನ್ನು ನೀಡ‌ಲಾಗಿದೆ. ಟಮೋಟೊ ಬಾತನ್ನು ಸಾವಿರಾರು ಮಂದಿ ತಿಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  80ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳು ಇಂದು ಬೆಳಿಗ್ಗೆ  7.30ಕ್ಕೆ ತೆರೆದವು. ಬೆಳಿಗ್ಗೆ ವಾಯುವಿಹಾರಕ್ಕೆ ಬಂದವರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಆಟೋರಿಕ್ಷಾ ಚಾಲಕರು, ಮಹಿಳೆಯರು ಸೇರಿದಂತೆ 500ಕ್ಕೂ ಹೆಚ್ಚು ಜನರು ಕ್ಯೂನಲ್ಲಿ ನಿಂತಿದ್ದರು.  7.30ಕ್ಕೆ ಸರಿಯಾಗಿ ಟೋಕನ್‌ಗಳನ್ನು ವಿತರಿಸಲಾಯಿತು. ಆರಂಭವಾದ ಅರ್ಧ ಗಂಟೆಗಳಲ್ಲಿ ತಿಂಡಿ ಮುಗಿದಿದೆ ಎಂದು ಬಹುತೇಕ ಕ್ಯಾಂಟೀನ್‌ಗಳಲ್ಲಿ ನಾಮಫಲಕ ಅಳವಡಿಸಿದ್ದರಿಂದ ಹೆಚ್ಚಿನ ಜನರು ತಿಂಡಿ ಸಿಗದೆ ನಿರಾಶರಾದರು.  ಮೇಯರ್ ಪದ್ಮಾವತಿ ಅವರು ಪ್ರತಿನಿಧಿಸುವ ಪ್ರಕಾಶ್ ನಗರ ವಾರ್ಡ್‌ನಲ್ಲಿ 500ಕ್ಕೂ ಹೆಚ್ಚು ಮಂದಿ ಕುತೂಹಲದಿಂದಲೇ ಇಂದಿರಾ ಕ್ಯಾಂಟೀನ್‌ನ ಮುಂಭಾಗ ಸರತಿ ಸಾಲಿನಲ್ಲಿ ನಿಂತಿದ್ದರು. ಅರ್ಧ ಗಂಟೆಯ ಒಳಗೆ ಬೆಳಿಗ್ಗಿನ ಉಪಹಾರ ಮುಗಿದಿತ್ತು.  ನಗರದ ಕತ್ರಿಗುಪ್ಪೆಯಲ್ಲಿರುವ ಅಡುಗೆಮನೆ ಮತ್ತೊಂದು ಇನ್ನೊಂದು ಕೇಂದ್ರದಿಂದ 101 ಕ್ಯಾಂಟೀನ್‌ಗಳಿಗೆ ಉಪಹಾರವನ್ನು ಪೂರೈಸಲಾಗಿತ್ತು. ಆದರೆ, ಹೆಚ್ಚಿನ ಕ್ಯಾಂಟೀನ್‌ಗಳಿಗೆ ಸಕಾಲಕ್ಕೆ ಉಪಹಾರ ತಲುಪದೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು.  ಹೆಚ್‌ಎಎಲ್‌ನಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ 7.30ರಿಂದ ಆರಂಭವಾಗಿದ್ದು, 8 ಗಂಟೆಗೆಲ್ಲಾ ಉಪಹಾರ ಖಾಲಿಯಾಯಿತು. ಸುಮಾರು 300ಕ್ಕೂ ಹೆಚ್ಚು ಮಂದಿ ಗ್ರಾಹಕರು ವಾಪಸ್ಸಾಗಿದ್ದಾರೆ.  ವಸಂತನಗರ ವಾರ್ಡ್‌ನಲ್ಲಿರುವ ಇಂದಿರಾ ಕ್ಯಾಂಟೀನ್‌ನನ್ನು ಜನ ಕಿಕ್ಕಿರಿದು ತುಂಬಿದ್ದರು. ಈ ವಾರ್ಡ್‌ನಲ್ಲಿ ಬಹುತೇಕ ಮಂದಿ ಆಟೋ ಡ್ರೈವರ್‌ಗಳೇ ಸರತಿ ಸಾಲಿನಲ್ಲಿ ನಿಂತಿದ್ದು ವಿಶೇಷವಾಗಿತ್ತು.  ಕೆಆರ್‌ಪುರಂನ ದೇವಸಂದ್ರ ವಾರ್ಡ್‌ನಲ್ಲಿರುವ ಸಂತೆ ಮೈದಾನದಲ್ಲಿ 5 ರೂ.ಗೆ ತಿಂಡಿ ಸಿಗುತ್ತವೆ ಎಂಬ ಸುದ್ದಿ ತಿಳಿದು ಬೆಳಿಗ್ಗೆ 7 ಗಂಟೆಗೆಲ್ಲಾ ವ್ಯಾಪಾರಸ್ಥರು, ರೈತರೂ ಕೂಡ ಸರತಿ ಸಾಲಿನಲ್ಲಿ ನಿಂತು ಉಪಹಾರ ಸೇವಿಸಿ, ಸಂಭ್ರಮ ವ್ಯಕ್ತಪಡಿಸಿದರು. ಗುರಪ್ಪನಪಾಳ್ಯ ವಾರ್ಡ್‌ನ ಬನ್ನೇರುಘಟ್ಟ ರಸ್ತೆಯಲ್ಲಿನ ಬಿಸ್ಮಿಲ್ಲಾ ನಗರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನಿಂತು ಉಪಹಾರ ಸೇವಿಸಿದರು. ಇಲ್ಲಿಯೂ ಕೂಡ ಹೆಚ್ಚಿನ ಮಂದಿಗೆ ತಿಂಡಿ ಸಿಗಲಿಲ್ಲ ಎಂದು ವರದಿಯಾಗಿದೆ.  ಇಂದಿರಾ ಕ್ಯಾಂಟೀನ್‌ನಲ್ಲಿ ಇಂದು ಬೆಳಿಗ್ಗೆ ನೀಡಲಾದ ಉಪಹಾರ ರುಚಿ ರುಚಿಯಾಗಿದ್ದರೂ ಕಡಿಮೆ ಪ್ರಮಾಣದಲ್ಲಿ ನೀಡಲಾಗಿದೆ ಎಂದು ಗ್ರಾಹಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಬಹುತೇಕ ವಾರ್ಡ್‌ಗಳಲ್ಲಿನ ಕ್ಯಾಂಟೀನ್‌ಗಳಲ್ಲಿ 7.30ರಿಂದ 8.30ರ ವರೆಗೆ ಸಮಯ ನಿಗದಿಪಡಿಸಲಾಗಿದೆ. ಈ ಅವಧಿಯನ್ನು ಮತ್ತಷ್ಟು ವಿಸ್ತರಿಸಬೇಕು. 500 ಟೋಕನ್‌ಗಳ ಬದಲು 750 ರಿಂದ 1000ದ ವರೆಗೆ ಟೋಕನ್ ವಿತರಿಸಬೇಕು ಎಂದು ಗ್ರಾಹಕರು ಬಿಬಿಎಂಪಿಯನ್ನು ಆಗ್ರಹಪಡಿಸಿದ್ದಾರೆ.  ಇಂದಿರಾ ಕ್ಯಾಂಟೀನ್‌ಗಳಿಗೆ ಕೇವಲ 150 ತಟ್ಟೆಗಳನ್ನು ಮಾತ್ರವೇ ನೀಡಲಾಗಿದೆ. ಒಬ್ಬರು ತಿಂದ ನಂತರ ಆ ತಟ್ಟೆಯನ್ನು ತೊಳೆದು ನಂತರ ಮತ್ತೊಬ್ಬರಿಗೆ ತಿಂಡಿ ನೀಡಲಾಗಿದೆ ಇದರಿಂದ ಸಮಯ ಇನ್ನಷ್ಟು ತಗುಲುತ್ತಿದೆ. ಹಾಗಾಗಿ ಹೆಚ್ಚಿನ ತಟ್ಟೆಗಳನ್ನು ವಿತರಿಸಬೇಕು. ಇಲ್ಲವೆ, ಪರಿಸರಕ್ಕೆ ಹಾನಿಯಾಗದಂತಹ, ಮರು ಬಳಕೆ ಮಾಡಲಾಗದಂತಹ ಅಡಿಕೆ ತಟ್ಟೆಗಳನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.

No comments