Breaking News

ಕಸಾಯಿಖಾನೆ ಸ್ಥಾಪನೆ ವಿರೋಧಿಸಿ ಪಕ್ಷಾತೀತ ಪ್ರತಿಭಟನೆ





ಬೆಳಗಾವಿ: ರಾಜ್ಯ ಸರ್ಕಾರ ಮಲ್ಲಪ್ಪನ ಗುಡ್ಡದಲ್ಲಿ ಕಸಾಯಿಖಾನೆ ಸ್ಥಾಪನೆ ವಿರೋಧಿಸಿ ಹಿರೇಬಾಗೇವಾಡಿ ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಪ್ರತಿಭಟನೆ ನಡೆಸಿದರು. ಹತ್ತಾರು ಟ್ರ್ಯಾಕ್ಟರ್‌ಗಳಲ್ಲಿ ಆಗಮಿಸಿದ್ದ ಗ್ರಾಮಸ್ಥರು ಟ್ರ್ಯಾಕ್ಟರ್‌ ಸಮೇತ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಸಾಯಿಖಾನೆ ಸ್ಥಾಪನೆ ವಿರೋಧಿಸಿ ಘೋಷಣೆ ಮೊಳಗಿಸಿದರು.

ಮಲ್ಲಯ್ಯನ ದೇವಸ್ಥಾನ ಇರುವ ಗುಡ್ಡದಲ್ಲಿ ಕಸಾಯಿಖಾನೆ ಸ್ಥಾಪನೆಯಾದರೆ ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗಲಿದೆ. ಪರಿಸರವೆಲ್ಲ ಕಲುಷಿತಗೊಂಡು ಅನಾರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ. ಗುಡ್ಡದ ಮಲ್ಲಯ್ಯ ದೇವರ ಬಗ್ಗೆ ಗ್ರಾಮಸ್ಥರು ಬಹಳ ಭಕ್ತಿ ಹೊಂದಿದ್ದಾರೆ. ಇದೊಂದು ಜಾಗೃತ ಸ್ಥಳವಾಗಿಯೂ ಗುರುತಿಸಿಕೊಂಡಿದೆ. ಆದ್ದರಿಂದ ಈ ದೇವಸ್ಥಾನದ ಹತ್ತಿರ ಯಾವುದೇ ಕಾರಣಕ್ಕೂ ಕಸಾಯಿಖಾನೆ ಆರಂಭವಾಗಲು ತಾವು ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಮಲ್ಲಯ್ಯನ ಗುಡ್ಡದಲ್ಲಿರುವ ಸರಕಾರಿ ಗೋಮಾಳಕ್ಕೆ ಪ್ರತಿವರ್ಷ ಸರಕಾರದ ಟೆಂಡರ್‌ ಕರೆಯಲಾಗುತ್ತದೆ. ಗ್ರಾಮಸ್ಥರು ಒಟ್ಟಾಗಿ ಟೆಂಡರ್‌ ಹಣ ತುಂಬಿ ವರ್ಷವಿಡೀ ದನಕರುಗಳಿಗೆ ಬೇಕಾದ ಮೇವನ್ನು ಇಲ್ಲಿಂದ ಪಡೆದುಕೊಳ್ಳುತ್ತಾರೆ. ಇಲ್ಲೊಂದು ಚಿಕ್ಕ ಕೆರೆ ಸಹ ಇದೆ. ಇಲ್ಲಿ ಕಸಾಯಿಖಾನೆ ಸ್ಥಾಪನೆಯಾದರೆ ಸುತ್ತಲಿನ 300 ರಿಂದ 400 ಎಕರೆ ಜಮೀನಿಗೆ ಕುತ್ತು ಬರಲಿದ್ದು, ಜಾನುವಾರುಗಳ ಮೇವಿಗೂ ಪರದಾಡುವಂತಾಗಬಹುದು ಎಂದು ಪ್ರತಿಭಟನಾಕಾರರು ಕಳವಳ ವ್ಯಕ್ತಪಡಿಸಿದರು.

ನಂತರ ಈ ಕುರಿತು ಅಪರ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಇಟ್ನಾಳ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅಲ್ಲದೆ, ಕಸಾಯಿಖಾನೆಗೆ ಯಾವುದೇ ಜಮೀನು ಮಂಜೂರು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.


ಪಕ್ಷಾತೀತ ಬೆಂಬಲ: ಹಿರೇಬಾಗೇವಾಡಿ ಗ್ರಾಮಸ್ಥರ ಹೋರಾಟಕ್ಕೆ ಪಕ್ಷಾತೀತ ಬೆಂಬಲ ವ್ಯಕ್ತವಾಗಿದ್ದು ವಿಶೇಷವಾಗಿತ್ತು. ಬಿಜೆಪಿ ಗ್ರಾಮೀಣ ಶಾಸಕ ಸಂಜಯ ಪಾಟೀಲ, ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲಕ್ಷ್ಮೇ ಹೆಬ್ಬಾಳಕರ ಹಾಗೂ ಹಿರೇಬಾಗೇವಾಡಿಯ ಜೆಡಿಎಸ್‌ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕಸಾಯಿಖಾನೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದರು. ಹಿರೇಬಾಗೇವಾಡಿಯ ಪ್ರಮುಖ ಮುಸ್ಲಿಂ ಮುಖಂಡರು ಕೂಡ ಹೋರಾಟದಲ್ಲಿ ಪಾಲ್ಗೊಂಡು ಗಮನ ಸೆಳೆದರು.





No comments