Breaking News

ತಿಂಗಳು ಕಳೆದರೂ ಶರತ್ ಹತ್ಯೆಗೈದ ಆರೋಪಿಗಳ ಬಂಧನವಿಲ್ಲ!




 ಮಂಗಳೂರು : ಆರೆಸ್ಸೆಸ್ ಕಾರ್ಯಕರ್ತ, ಬಿ.ಸಿ.ರೋಡ್ ಉದಯ ಲಾಂಡ್ರಿ ಮಾಲಕನ ಪುತ್ರ ಶರತ್ ಮಡಿವಾಳರವರ ಮೇಲೆ ದಾಳಿ ನಡೆದು ಆಗಸ್ಟ್ ೪ಕ್ಕೆ ಒಂದು ತಿಂಗಳು ಸಂದಿವೆ ಆದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ.

ಸೌಮ್ಯ ಸ್ವಭಾವದ ಶರತ್ ಮಡಿವಾಳ ತನ್ನ ತಂದೆಯ ಅಸೌಖ್ಯದ ಹಿನ್ನೆಲೆಯಲ್ಲಿ ತಂದೆ ಸುಮಾರು ೪೭ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಬಿ.ಸಿ.ರೋಡಿನ ಉದಯ ಲಾಂಡ್ರಿಯನ್ನು ತಾನು ನೋಡಿಕೊಳ್ಳುತ್ತಿದ್ದರು. ಎಂದಿನಂತೆ ಜುಲೈ ೪ರಂದು ರಾತ್ರಿ ೯:೩೦ರ ಸುಮಾರಿಗೆ ಲಾಂಡ್ರಿಯಲ್ಲಿ ಕೆಲಸ   ನಿರತರಾಗಿದ್ದ ವೇಳೆ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿತ್ತು. ಗಂಭೀರ ಗಾಯಗೊಂಡಿದ್ದ ಶರತ್‌ನನ್ನು ಪಕ್ಕದ ಅಂಗಡಿಯವರು ತುಂಬೆ ಆಸ್ಪತ್ರೆಗೆ ಸಾಗಿಸಿದ್ದರು. ಅಲ್ಲಿನ ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜುಲೈ ೭ರಂದು ರಾತ್ರಿ ಶರತ್ ಕೊನೆಯುಸಿರೆಳೆದಿದ್ದರು.

ಶರತ್ ಹತ್ಯೆ ಆರೋಪಿಗಳ ಬಂಧನಕ್ಕಾಗಿ ಆರು ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಮೂರು ತಂಡ ಮಂಗಳೂರುವ ಕಮಿಷನರೇಟ್ ವ್ಯಾಪ್ತಿಯಲ್ಲಿ ತನಿಖೆ ನಡೆಸಿದ್ದರೆ ಮೂರು ತಂಡ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ತನಿಖೆ ನಡೆಸಿತ್ತು. ಆದರೆ ಆರೋಪಿಗಳ ಬಂಧನ ಈವರೆಗೆ ತನಿಖಾ ತಂಡಕ್ಕೆ ಸಾಧ್ಯವಾಗಿಲ್ಲ.

ಶರತ್ ಹತ್ಯೆ ಖಂಡಿಸಿ ಸಂಘಪರಿವಾರ, ಬಿ.ಜೆ.ಪಿ. ಬಿ.ಸಿ.ರೋಡಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ಆರೋಪಿಗಳನ್ನು ಶೀರ್ಘವೇ ಬಂಧಿಸುವಂತೆ ಆಗ್ರಹಿಸಿತ್ತು. ಅಲ್ಲದೆ ಶರತ್ ಹತ್ಯೆ ಪ್ರಕರಣ ರಾಜಕೀಯ ಆರೋಪ, ಪ್ರತ್ಯರೋಪಕ್ಕೂ ಎಡೆ ಮಾಡಿಕೊಟ್ಟಿತ್ತು. ಶರತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರಂಭದಲ್ಲಿ ನಿರ್ಲಕ್ಷ್ಯ ತೋರಿದ್ದ ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಪ್ರತಿಭಟನೆಯ ಕಾವು ಹೆಚ್ಚಾದಂತೆ ತನಿಖೆಯನ್ನು ತೀವ್ರಗೊಳಿಸಿತ್ತು. ಆ ಬಳಿಕ ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿತ್ತು.

ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ತಾಲೂಕಿನ ಸಹಿತ ಜಿಲ್ಲೆಯ ಸುಮಾರು ೬೦ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಆದರೆ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಪೊಲೀಸರಿಗೆ ಇನ್ನೂ ದೊರೆತಿಲ್ಲ. ಕೇರಳ ಕಡೆಯಿಂದ ಬಂದಿರುವ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಶರತ್ ತಂದೆ, ತಾಯಿ ಹಾಗೂ ಬಿಜೆಪಿ, ಸಂಘಪರಿವಾರದ ನಾಯಕರು ಆರೋಪಿಸಿದ್ದ ಹಿನ್ನೆಲೆಯಲ್ಲಿ ಕೇರಳ ರಾಜ್ಯದಲ್ಲೂ ಪ್ರಕರಣದ ಬಗ್ಗೆ ತನಿಖೆ ನಡೆಸುವುದಾಗಿ ಪಶ್ಚಿಮ ವಲಯದ ಐಜಿಪಿ ಪಿ.ಹರಿಶೇಖರಣ್ ತಿಳಿಸಿದ್ದರು. ತನಿಖೆಗಾಗಿ ಕೇರಳ ಪೊಲೀಸರ ಸಹಕಾರ ಪಡೆಯುವುದಾಗಿಯೂ ಹೇಳಿದ್ದರು. ಆದರೆ ಕೇರಳದಲ್ಲಿ ನಡೆಸಿದ ತನಿಖೆ ಯಾವ ಮಟ್ಟಕ್ಕೆ ತಲುಪಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲವಾಗಿದೆ.

ಶರತ್ ಮಡಿವಾಳ ಹತ್ಯೆ ಆರೋಪಿಗಳ ಬಂಧಿಸುವಲ್ಲಿ ಹಾಗೂ ಬಂಟ್ವಾಳದಲ್ಲಿ ನಡೆಯುತ್ತಿದ್ದ ಅಹಿತಕರ ಘಟನೆಯನ್ನು ನಿಯಂತ್ರಿಸುವಲ್ಲಿ ವಿಫಲರಾದ ಬಂಟ್ವಾಳದ ಹಲವು ಪೊಲೀಸರ ವರ್ಗಾವಣೆ ಕೂಡಾ ನಡೆದಿದ್ದು ಹೊಸ ಪೊಲೀಸ್ ಅಧಿಕಾರಿಗಳ ನೇಮಕವಾಗಿದೆ. ಈ ಸಂದರ್ಭದಲ್ಲಿ ಹೊಸ ಪೊಲೀಸ್ ಅಧಿಕಾರಿಗಳು ಶರತ್ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಬಂಧಿಸುವರು ಎಂಬ ಆಶಾವಾದ ಜನರಲ್ಲಿ ಮೂಡಿತ್ತು. ಆದರೆ ಹೊಸ ಅಧಿಕಾರಿಗಳಿಂದ ಕೂಡಾ ಪ್ರಕರಣವನ್ನು ಭೇದಿಸಲು ಸಾಧ್ಯವಾಗಿಲ್ಲ.

ಶರತ್ ಹತ್ಯೆ ನಡೆದ ಸಂದರ್ಭದಲ್ಲಿ ಪ್ರತಿಭಟನೆ, ಸುದ್ದಿಗೋಷ್ಠಿ, ಖಂಡನೆ ನೀಡಿದವರು ಕೂಡಾ ಈಗ ಮೌನವಾಗಿದ್ದಾರೆ. ಶರತ್ ಮೃತದೇಹ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿದ ಆರೋಪಿಗಳಿಗೆ ಜಾಮೀನು ದೊರೆತಿದೆ. ಹತ್ಯೆ ಆರೋಪಿಗಳ ಬಗ್ಗೆ ಸುಳಿವು ಲಭ್ಯವಾಗಿದೆ ಎಂದು ಪೊಲೀಸರು ಆರಂಭದಿಂದ ಹೇಳುತ್ತಾ ಬಂದಿದ್ದಾರೆ. ಆದರೆ ಸುಳಿವು ಆಧಾರದಲ್ಲಿ ಈವರಗೆ ಯಾವುದೇ ಆರೋಪಿಗಳ ಬಂಧನವಾಗಿಲ್ಲ.

ತಪ್ಪಿದ ಪೊಲೀಸರ ಫಿಕ್ಸಿಂಗ್ ತಂತ್ರ

ಬಂಟ್ವಾಳ ಪೊಲೀಸ್ ವೃತ್ತದಲ್ಲಿ ನಡೆಯುವ ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳನ್ನು ಫಿಕ್ಸಿಂಗ್ ಮಾಡಲಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ. ಶರತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೂಡಾ ಫಿಕ್ಸಿಂಗ್‌ಗೆ ಪೊಲೀಸರು ಸಿದ್ಧತೆ ನಡೆಸಿದ್ದರು. ಇದಕ್ಕಾಗಿ ಮೂವರು ಅಮಾಯಕರನ್ನು ಒಂದು ವಾರಗಳ ಕಾಲ ಅಕ್ರಮ ಬಂಧನದಲ್ಲಿರಿಸಿ ತೀವ್ರ ವಿಚಾರಣೆಗೆ ಗುರಿ ಪಡಿಸಿ ಅವರ ತಲೆಗೆ ಈ ಪ್ರಕರಣವನ್ನು ಕಟ್ಟಲು ತಂತ್ರ ರೂಪಿಸಿದ್ದರು. ಆದರೆ ಯುವಕರ ಕುಟುಂಬಸ್ಥರು ಸುದ್ದಿಗೋಷ್ಠಿ ನಡೆಸಿ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ದಾಖಲಿಸಲು ಮುಂದಾಗುತ್ತಿದ್ದ ಮಾಹಿತಿ ಪಡೆದ ಪೊಲೀಸರು ಅಕ್ರಮ ಬಂಧನದಲ್ಲಿದ್ದ ಈ ಮೂವರನ್ನು ಶರ್ತಬದ್ಧವಾಗಿ ಬಿಡುಗಡೆಗೊಳಿಸಿದ್ದರು.

ಶರತ್ ಕೊಲೆ ಪ್ರಕರಣ ರಾಷ್ಟ್ರೀಯ ತನಿಖಾ ದಳ ಮುಂದಿನ ತನಿಖೆಯನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆ ಇದ್ದ ಹಿನ್ನೆಲೆಯಲ್ಲಿ ಪೊಲೀಸರು ಮತ್ತೆ ಅಮಾಯಕರ ತಲೆಗೆ ಕಟ್ಟುವ ಫಿಕ್ಸಿಂಗ್ ತಂತ್ರ ಸ್ಥಗಿತಗೊಂಡಿದೆ ಎಂದು ಹೇಳಲಾಗುತ್ತಿದೆ.

No comments