ರಸ್ತೆಯಲ್ಲಿ ನಮಾಜ್ ಮಾಡುವುದನ್ನು ತಡೆಯಲಾಗದಿದ್ದರೆ ಠಾಣೆಗಳಲ್ಲಿ ಜನ್ಮಾಷ್ಟಮಿ ಆಚರಿಸುವುದನ್ನೂ ತಡೆಯುವ ಹಕ್ಕು ನನಗಿಲ್ಲ
ಲಖನೌ: ಈದ್ ಹಬ್ಬದ ಸಂದರ್ಭ ರಸ್ತೆಯಲ್ಲೇ ನಮಾಜ್ ಮಾಡುವುದನ್ನು ತಡೆಯಲಾರೆ ಎಂದ ಮೇಲೆ ಪೊಲೀಸ್ ಠಾಣೆಗಳಲ್ಲಿ ಜನ್ಮಾಷ್ಟಮಿ ಆಚರಿಸುವುದನ್ನೂ ತಡೆಯುವ ಹಕ್ಕು ನನಗಿಲ್ಲ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ರಾಜ್ಯದಲ್ಲಿ ಈ ವರ್ಷ ಕನ್ವಾರ್ ಯಾತ್ರೆ (ಶಿವನ ಭಕ್ತರು ಹಮ್ಮಿಕೊಳ್ಳುವ ವರ್ಷಂಪ್ರತಿ ನಡೆಯುವ ಯಾತ್ರೆ) ಸಂದರ್ಭ ಡಿಜೆ ಸಿಸ್ಟಂ, ಧ್ವನಿವರ್ಧಕಗಳ ಬಳಕೆಗೆ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದರು. ಮೈಕ್ರೋಫೋನ್‌ಗಳು, ಧ್ವನಿವರ್ಧಕಗಳ ಬಳಕೆಯನ್ನು ಎಲ್ಲ ಪುಣ್ಯಕ್ಷೇತ್ರಗಳಲ್ಲೂ ನಿಷೇಧಿಸಲು ಸಾಧ್ಯವೇ ಎಂದು ಪರಿಶಿಲಿಸುವಂತೆ ಅಧಿಕಾರಿಗಳ ಬಳಿ ಸೂಚಿಸಿದೆ. ಅದು ಸಾಧ್ಯವಿಲ್ಲ ಎಂದರು. ಹಾಗಾದರೆ, ಕನ್ವಾರ್ ಯಾತ್ರೆಯೂ ಎಂದಿನಂತೆಯೇ ನಡೆಯಲಿ, ನಿರ್ಬಂಧ ವಿಧಿಸುವುದು ಬೇಡ ಎಂದು ಸೂಚಿಸಿದೆ ಎಂಬುದಾಗಿ ಆದಿತ್ಯನಾಥ್ ತಿಳಿಸಿದ್ದಾರೆ.
ನೊಯ್ಡಾದಲ್ಲಿ ‘ಪ್ರೇರಣಾ ಜನಸಂಚಾರ್ ಏವಂ ಸಿದ್ಧ ಸಂಸ್ಥಾನ’ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂದರ್ಭ ಅವರು ಈ ಹೇಳಿಕೆ ನೀಡಿದ್ದಾರೆ.
ದೇಶದಲ್ಲಿ ಪ್ರತಿಯೊಬ್ಬರಿಗೂ ಹಬ್ಬಗಳನ್ನು ಆಚರಿಸಲು ಸ್ವಾತಂತ್ರ್ಯವಿದೆ. ದೇಶದ ಸಾಂಸ್ಕೃತಿಕ ಏಕತೆಯನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿರುವವರನ್ನು ಕೋಮುವಾದಿಗಳು ಎಂದು ಕರೆಯಲಾಗುತ್ತಿದೆ ಎಂದು ಆದಿತ್ಯನಾಥ್ ಹೇಳಿದ್ದಾರೆ.
No comments