ಎಸಿಬಿ ದುರ್ಬಳಕೆಯಿಲ್ಲ,ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ : ಸಿದ್ದರಾಮಯ್ಯ
ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ತಪ್ಪು ಮಾಡಿರುವುದು ನಿಜ. ಹಾಗಾಗಿ ಎಸಿಬಿ ಎಫ್‌ಐಆರ್ ದಾಖಲು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿ. ದೇವರಾಜು ಅರಸು ಅವರ 102ನೇ ಜನ್ಮ ಜಯಂತಿ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ದೇವರಾಜು ಅರಸು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ ಎಂದರು.
ಸರ್ಕಾರ ಎಸಿಬಿಯನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಬಿಜೆಪಿಯವರ ಈ ಆರೋಪ ಸತ್ಯಕ್ಕೆ ದೂರವಾದದ್ದು. ಹಾಗಾದರೆ ಆದಾಯ ತೆರಿಗೆ ಇಲಾಖೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮೇಲೆ ದಾಳಿ ನಡೆಸಿರುವುದು ಐಟಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳಿದಂತಾಗಲಿಲ್ಲವೆ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಅವರ ಮೇಲೆ ಎಸಿಬಿ ಎಫ್‌ಐಆರ್ ದಾಖಲು ಮಾಡಿರುವ ಕ್ರಮವನ್ನು ಪ್ರತಿಭಟಿಸಿ ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ಹೋರಾಟ ನಡೆಸುತ್ತಿರುವವರಿಗೆ ಏನೂ ಹೇಳಲಾಗದು. ತಪ್ಪು ಮಾಡಿದ ಯಡಿಯೂರಪ್ಪ ಅವರ ಪರವಾಗಿ ಹೋರಾಟ ನಡೆಸುತ್ತಾರೆ ಎಂದು ವ್ಯಂಗ್ಯವಾಡಿದರು.
loading...
No comments