Breaking News

ಬಿಎಸ್‌ವೈ ವಿರುದ್ಧ ಎಸಿಬಿಗೆ ದೂರು ಬಿಜೆಪಿ ಮುಖಂಡರ ಪ್ರತಿಭಟನೆ


ಬೆಂಗಳೂರ : ಶಿವರಾಮಕಾರಂತ  ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದಾಖಲಾಗಿರುವ ದೂರು ವಿರೋಧಿಸಿ ಇಂದು ಬಿಜೆಪಿ ಮುಖಂಡರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.

ಪ್ರಬಲ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿ ತಮ್ಮ ಮಾರ್ಗದರ್ಶನದಂತೆ ನಡೆಯುವ ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸಿ, ವಿರೋಧ ಪಕ್ಷ ಬಿಜೆಪಿಯ ನಾಯಕರನ್ನು ಗುರಿಯಾಗಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಎಸಿಬಿಯಲ್ಲಿ ದೂರು ದಾಖಲಿಸುವ ಮೂಲಕ ತಮಗೆ ಇಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಇಂತಹ ದ್ವೇಷಪೂರಿತ ರಾಜಕಾರಣವನ್ನು ಕೂಡಲೇ ಮುಖ್ಯಮಂತ್ರಿಗಳು ಕೈಬಿಡಬೇಕು ಎಂದು ಆಗ್ರಹಿಸಿದರು.ಇಂದು ಬೆಳಿಗ್ಗೆಯಿಂದಲೇ ಮೈಸೂರು ಬ್ಯಾಂಕ್ ವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಆಡಳಿತ ಕ್ರಮವನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿದರು.

ನಂತರ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡರು ಹಾಗೂ ಸಂಸದೆ ಶೋಭಾಕರಂದ್ಲಾಜೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇಡೀ ಪೊಲೀಸ್ ಆಡಳಿತ ನಿಯಂತ್ರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರಿಗೆ ನೀಡಿದ್ದಾರೆ. ತಮ್ಮ ಸಂಪುಟದಲ್ಲಿ ಭ್ರಷ್ಟಾಚಾರ ಹಾಗೂ ಇನ್ನಿತರ ಪ್ರಕರಣಗಳಲ್ಲಿ ಭಾಗಿಯಾದ ಶಾಸಕರು ಹಾಗೂ ಸಚಿವರನ್ನು ರಕ್ಷಿಸುವ ಉದ್ದೇಶದಿಂದ ಲೋಕಾಯುಕ್ತವನ್ನು ದುರ್ಬಲಗೊಳಿಸಿ ಭ್ರಷ್ಟಾಚಾರ ನಿಗ್ರಹದಳ ಸ್ಥಾಪಿಸಲಾಗಿದೆ ಎಂದರು.

ಕೆಂಪಯ್ಯ ಅವರ ಮೂಲಕ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳನ್ನು ನಿಯಂತ್ರಣ ಮಾಡಲಾಗುತ್ತಿದೆ. ಪೊಲೀಸ್ ಅಧಿಕಾರಿ ಗಣೇಶ್ ಸಾವಿಗೆ ಸಂಬಂಧಿಸಿದಂತೆ ನ್ಯಾಯಾಲಯದ ತನಿಖೆ ನಡೆಸಲು ಒತ್ತಾಯಿಸಿದರೂ ಸಹ ಪರಿಗಣಿಸದ ಕಾಂಗ್ರೆಸ್ ಸರ್ಕಾರ, ಆ ಪ್ರಕರಣದಲ್ಲಿ ಆರೋಪಿಯಾಗಿದ್ದ ಜಾರ್ಜ್ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಾಜ್ಯದ ರೈತರು, ವಿದ್ಯಾರ್ಥಿಗಳು, ಕಾರ್ಮಿಕರು, ದಲಿತರ ರಕ್ಷಣೆ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ತಮ್ಮ ನಡೆಯನ್ನು ಬದಲಿಸಿಕೊಳ್ಳದಿದ್ದರೆ ಬಿಜೆಪಿ ಹೋರಾಟವನ್ನು ತೀವ್ರಗೊಳಿಸಲಿದೆ ಎಂದರು.

ಮಾಜಿ ಸಚಿವ ಸೋಮಣ್ಣ ಅವರು ಮಾತನಾಡಿ, ರಾಜ್ಯ ಕಾಂಗ್ರೆಸ್‌ನ ದುರಾಡಳಿತಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ ಇಂದಿನಿಂದಲೇ ರಾಜ್ಯಾದ್ಯಂತ ಜನಜಾಗೃತಿ ಮೂಡಿಸಲಿದೆ. ಜವಬ್ದಾರಿಯುತವಾಗಿ ನಡೆದುಕೊಳ್ಳಬೇಕಾದ ಸರ್ಕಾರ ತನ್ನೆಲ್ಲಾ ಕರ್ತವ್ಯವನ್ನು ಮರೆತು ವರ್ತಿಸುತ್ತಿದೆ. ಸಿದ್ದರಾಮಯ್ಯ ಅವರ ನ‌ಡೆ ಕೆಲ ಕಾಂಗ್ರೆಸ್ಸಿಗರನ್ನ ಬೇಸರ ಹಾಗೂ ಮುಜುಗರಕ್ಕೀಡು ಮಾಡಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿಗರೇ ಕಾಂಗ್ರೆಸ್ಸಿಗೆ ವೈರಿಗಳಾಗಲಿದ್ದಾರೆ. ಪಾರದರ್ಶಕ ಆಡಳಿತವಿಲ್ಲದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಸೋಲು ಖಚಿತ ಎಂದರು.

ಇನ್ನುಳಿದಂತೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಮಾತನಾಡಿದರು.  ಪ್ರತಿಭಟನೆಯಲ್ಲಿ ಮಾಜಿ ಸಚಿವ ಕಟ್ಚಾ ಸುಬ್ರಹ್ಮಣ್ಯನಾಯ್ಡು, ರಾಜ್ಯ ಪ್ರದಾನ ಕಾರ್ಯದರ್ಶಿ ರವಿಕುಮಾರ್, ನಗರಾಧ್ಯಕ್ಷ ಸದಾಶಿವ, ಸುಬ್ಬಣ್ಣ, ಪದ್ಮನಾಭ  ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
loading...

No comments