ಛೋಟಾ ರಾಜನ್ ಸಹಚರ ಗ್ಯಾಂಗ್‌ಸ್ಟರ್ ವಿನೀಶ್ ಶೆಟ್ಟಿ ಬಂಧನ
ಮಂಗಳೂರು : ಭೂಗತ ಪಾತಕಿ ಛೋಟಾ ರಾಜನ್ ಸಹಚರ, ಗ್ಯಾಂಗ್‌ಸ್ಟರ್ ವಿನೀಶ್ ಶೆಟ್ಟಿ(೪೬) ಎಂಬಾತನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕೋಣಾಜೆ ಠಾಣಾ ಎಸ್‌ಐ ಅಶೋಕ್ ನೇತೃತ್ವದ ಪೊಲೀಸ್ ತಂಡ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ . ಉಡುಪಿ ಜಿಲ್ಲೆಯ ಶಿರ್ವ ಮೂಲದ ವಿನೀಶ್ ಶೆಟ್ಟಿ, ಖತರ್‌ನಾಕ್ ಕ್ರಿಮಿನಲ್ ಆಗಿದ್ದು ಕೊಲೆ, ಕೊಲೆಯತ್ನ, ದರೋಡೆ ಮತ್ತಿತರ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ಬಳಿ ೨೦೦೩ರಲ್ಲಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣದಲ್ಲಿ ಬಂಧಿತನಾಗಿದ್ದ ಈತ ೨೦೦೫ರಲ್ಲಿ ಜಾಮೀನು ಪಡೆದು ಹೊರಬಂದಿದ್ದ. ಬಳಿಕ ಕೋರ್ಟ್ ವಿಚಾರಣೆಗೆ ಹಾಜರಾಗದೆ ತಲೆಮರೆಸಿದ್ದ ವಿನೀಶ್ ಪತ್ತೆಗೆ ನ್ಯಾಯಾಲಯ ಸರ್ಚ್ ವಾರೆಂಟ್ ಹೊರಡಿಸಿತ್ತು. ವಿನೀಶ್ ನಿನ್ನೆ ತಡರಾತ್ರಿ ಮುಂಬೈ ವಿಮಾನ ನಿಲ್ದಾಣಕ್ಕೆ ಬರುವ ಖಚಿತ ಮಾಹಿತಿ ಪಡೆದ ಪೊಲೀಸ್ ತಂಡ ವಶಕ್ಕೆ ಪಡೆದಿದೆ.
೨೦೦೩ರ ಮಾರ್ಚ್ ೩ರಂದು ಮುಡಿಪು ಗ್ರಾಮದಲ್ಲಿ ಕರಿಕಲ್ಲು ಕೋರೆ ವಿಚಾರಕ್ಕೆ ಸಂಬಂಧಿಸಿ ಕೋರೆ ಮಾಲಕ ವೇಣುಗೋಪಾಲ್ ನಾಕ್ ಮತ್ತು ಕಾರು ಚಾಲಕ ಸಂತೋಷ್ ಎಂಬವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಪ್ರಕರಣದಲ್ಲಿ ಲೋಕೇಶ್ ಬಂಗೇರಾ ಹಾಗೂ ವಿನೀಶ್ ಶೆಟ್ಟಿ ಪ್ರಧಾನ ಆರೋಪಿಗಳಾಗಿದ್ದು, ಮಹಿಳೆ ಸೇರಿದಂತೆ ಒಟ್ಟು ೬ ಮಂದಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ೨೦೦೫ರಲ್ಲಿ ಜೈಲಿನಿಂದ ಹೊರಬಂದ ವಿನೀಶ್ ಶೆಟ್ಟಿ ಭೂಗತನಾಗಿದ್ದ. ನಂತರದ ದಿನಗಳಲ್ಲಿ ಭೂಗತ ಪಾತಕಿ ಛೋಟಾ ರಾಜನ್ ಸಹಚರನಾಗಿ ವಿನೀಶ್ ಗುರುತಿಸಿಕೊಂಡಿದ್ದ. ಮುಂಬೈ, ಹೈದರಬಾದ್, ದಾವಣಗೆರೆ ಮತ್ತು ಮಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ, ಹಫ್ತಾಕ್ಕಾಗಿ ಬೆದರಿಕೆ, ಕೊಲೆ, ಕೊಲೆಯತ್ನ, ದರೋಡೆ ಕೇಸ್ ದಾಖಲಾಗಿತ್ತು. ಹಿಟ್‌ಲಿಸ್ಟ್‌ನಲ್ಲಿದ್ದ ಈತನಿಗಾಗಿ ಪೊಲೀಸರು ಬಲೆ ಬೀಸಿದ್ದರು.
ದಾವಣಗೆರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಡರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ವಿನೀಶ್ ತಲೆಮರೆಸಿದ್ದು ಮುಂಬೈಯಲ್ಲೇ ನೆಲೆಸಿದ್ದ. ಪುಣೆ ಅಹ್ಮದ್‌ನಗರದಲ್ಲಿ ೩ ಕೋಟಿ ರೂ. ಹವಾಲ ಹಣ ಸಾಗಾಟ ಪ್ರಕರಣದಲ್ಲಿಯೂ ವಿನೀಶ್ ಪೊಲೀಸರಿಗೆ ಬೇಕಾಗಿದ್ದ. ಭೂಗತ ಪಾತಕಿ ಛೋಟಾ ರಾಜನ್ ಮಾತ್ರವಲ್ಲದೆ ಛೋಟಾ ಶಕೀಲ್, ಹೇಮಂತ್ ಪೂಜಾರಿ ಸಹಚರನಾಗಿಯೂ ವಿನೀಶ್ ಕಾರ್ಯಾಚರಿಸುತ್ತಿದ್ದ ಎನ್ನಲಾಗಿದೆ. ಕೊಣಾಜೆ ಠಾಣಾ ಇನ್‌ಸ್ಪೆಕ್ಟರ್ ಅಶೋಕ್ ನೇತೃತ್ವದಲ್ಲಿ ಸಬ್‌ಇನ್‌ಸ್ಪೆಕ್ಟರ್ ಸುಕುಮಾರ್, ಸಿಬ್ಬಂದಿ ಶಿವಪ್ರಸಾದ್, ಮಹೇಶ್, ಉಮೇಶ್ ರಾಥೋಡ್ ವಿನೀಶ್ ಶೆಟ್ಟಿ ಪತ್ತೆ ಹಾಗೂ ಬಂಧನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಯನ್ನು ನಗರಕ್ಕೆ ಕರೆತಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
loading...
No comments