ಡಿಕೆಶಿಗೆ ಐಟಿ ಸಮನ್ಸ್, ಅಕ್ರಮ ಆಸ್ತಿಯ ಗಳಿಕೆ ಸಂಬಂಧ ಸಿಬಿಐ ಕೂಡ ತನಿಖೆ ಕೈಗೆತ್ತಿಕೊಳ್ಳುವ ಸಾಧ್ಯತೆ
ಬೆಂಗಳೂರು : ಇಂಧನ ಸಚಿವ ಡಿಕೆಶಿ ಅವರ ನಿವಾಸ ಮತ್ತು ಇನ್ನಿತರ ಕಡೆ ನಡೆದ ಐಟಿ ದಾಳಿಯ ವೇಳೆ ೩೦೦ ಕೋಟಿ ರೂ.ಗೂ ಅಧಿಕ ಅಘೋಷಿತ ಆಸ್ತಿ-ಪಾಸ್ತಿಯ ದಾಖಲೆ ಪತ್ರಗಳು ಪತ್ತೆಯಾಗಿರುವ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಚಿವ ಡಿ.ಕೆ.ಶಿವಕುಮಾರ್ ಮತ್ತು ಅವರ ಕುಟುಂಬಕ್ಕೆ ಸಮನ್ಸ್ ಜಾರಿಗೊಳಿಸಿದ್ದಾರೆ.
ಸುಮಾರು ೬೦ ಗಂಟೆಗಳ ಕಾಲ ಸಚಿವ ಡಿ.ಕೆ.ಶಿವಕುಮಾರ್ ಮತ್ತವರ ಕುಟುಂಬವರು, ಸಂಬಂಧಿಕರು, ಸ್ನೇಹಿತರ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ೩೦೦ ಕೋಟಿ ರೂ.ಗೂ ಮಿಗಿಲಾದ ಅಘೋಷಿತ ಆಸ್ತಿಪಾಸ್ತಿಯ ದಾಖಲೆ ಪತ್ರಗಳನ್ನು ನಿನ್ನೆಯಷ್ಟೇ ಕೊಂಡೊಯ್ದಿದ್ದ ಅಧಿಕಾರಿಗಳು ಅದರ ವಿಚಾರಣೆಗಾಗಿ ಸಮನ್ಸ್ ಜಾರಿ ಮಾಡಿದ್ದಾರೆ.
ಸಮನ್ಸನ್ನು ಶಿವಕುಮಾರ್ ಅವರ ಮಾವ ತಿಮ್ಮಯ್ಯ, ಸೋದರಿ ಪದ್ಮ, ಗುರೂಜಿ ದ್ವಾರಕನಾಥ್, ಉದ್ಯಮಿ ಸಚಿನ್ ನಾರಾಯಣ್ ಮತ್ತವರ ಕುಟುಂಬದವರಿಗೆ ನೀಡಲಾಗಿದೆ. ವೈಯಕ್ತಿಕ ಕಾರಣಗಳ ನೆಪ ಮಾಡಿರುವ ಶಿವಕುಮಾರ್ ಅವರು ವಿಚಾರಣೆಗೆ ೨ ದಿನಗಳ ಕಾಲಾವಕಾಶ ನೀಡುವಂತೆ ಐಟಿ ಅಧಿಕಾರಿಗಳನ್ನು ಕೋರಿದ್ದಾರೆ. ಆದರೆ ಐಟಿ ಅಧಿಕಾರಿಗಳು ಸಮಯಾವಕಾಶ ನೀಡುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ.
ಶಿವಕುಮಾರ್ ಅವರ ಜೊತೆಗೆ ಅವರ ಗುರುಗಳಾದ ಜ್ಯೋತಿಷಿ ದ್ವಾರಕಾನಾಥ್ ಅವರಿಗೂ ಅಘೋಷಿತ ಆಸ್ತಿಯ ವಿಚಾರಣೆಗಾಗಿ ಐಟಿ ಅಧಿಕಾರಿಗಳು ಸಮನ್ಸ್‌ಗೊಳಿಸಿದ್ದು, ನಾಳೆಯೇ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ದ್ವಾರಕನಾಥ್ ನಾಳೆ ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿ ತಮ್ಮ ಬಳಿ ಇರುವ ಆಸ್ತಿ ಪಾಸ್ತಿ ಕುರಿತು ಮಾಹಿತಿ ನೀಡುವುದು ಅನಿವಾರ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಐಟಿ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಅಪಾರ ಪ್ರಮಾಣದ ಆಸ್ತಿಪಾಸ್ತಿ, ನಗದು ಚಿನ್ನಾಭರಣ ದೊರೆತಿದ್ದರೂ ಅದರ ಲೆಕ್ಕದ ಮಾಹಿತಿಯನ್ನು ಶಿವಕುಮಾರ್ ಒದಗಿಸಿದ್ದಾರೆ. ಆದರೂ ಅವರಿಗೆ ಸೇರಿದ ೩೦೦ ಕೋಟಿ ರೂ.ಗೂ ಅಘೋಷಿತ ಆಸ್ತಿಯೂ ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ.
ಶಿವಕುಮಾರ್ ಮನೆಯಲ್ಲಿನ ದಾಳಿಯನ್ನು ಪೂರ್ಣಗೊಳಿಸಿ ನಿನ್ನೆ ಹೊರಟ ಐಟಿ ಅಧಿಕಾರಿಗಳ ತಂಡ ಮೂರು ಕಾರುಗಳಲ್ಲಿ ಅಪಾರ ಪ್ರಮಾಣದ ದಾಖಲೆ ಪತ್ರಗಳನ್ನು ತೆಗೆದುಕೊಂಡು ಅವುಗಳ ಪಂಚನಾಮೆ ಕಾರ್ಯದಲ್ಲಿ ತೊಡಗಿದ್ದಾರೆ. ಇದರ ಜೊತೆಗೆ ಡಿ.ಕೆ.ಶಿವಕುಮಾರ್ ಅವರ ಆಪ್ತ ಸಚಿನ್ ನಾರಾಯಣ್ ಸಹೋದರ ಚೇತನ್ ನಾರಾಯಣ್ ಹಾಗೂ ಎಸ್.ಪಿ.ಜಿ. ಗ್ರೂಪ್ ಹಣಕಾಸು ವ್ಯವಹಾರ, ಹೂಡಿಕೆ ಇನ್ನಿತರ ದಾಖಲಾತಿಗಳನ್ನು ನಾಲ್ಕು ಬ್ಯಾಗ್‌ಗಳಲ್ಲಿ ಕೊಂಡೊಯ್ದಿದ್ದು, ಅವುಗಳ ಪರಿಶೀಲನೆ ಕೂಡ ನಡೆಸಿದ್ದಾರೆ.
ಅಘೋಷಿತ ಸುಮಾರು ೩೦೦ ಕೋಟಿ ರೂ.ಗೂ ಹೆಚ್ಚಿನ ಆಸ್ತಿ ಪಾಸ್ತಿಯ ದಾಖಲೆ ಪತ್ರಗಳನ್ನು ವಿಚಾರಣೆಯಲ್ಲಿ ಒದಗಿಸದೇ ಹೋದರೆ ಶಿವಕುಮಾರ್ ಕಾನೂನಿನ ತೊಡಕಿಗೆ ಸಿಲುಕಬೇಕಾಗುತ್ತದೆ. ಜಾರಿ ನಿರ್ದೇಶನಾಲಯ ಜೊತೆಗೆ ಅಕ್ರಮ ಆಸ್ತಿಯ ಗಳಿಕೆ ಸಂಬಂಧ ಸಿಬಿಐ ಕೂಡ ತನಿಖೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಶಿವಕುಮಾರ್ ಬಂಧನವಾಗುವ ಸಾಧ್ಯತೆ ಇದೆ.
loading...
No comments