Breaking News

ಹಸಿರು ಬಣ್ಣಕ್ಕೆ ತಿರುಗಿದ ಸಮುದ್ರದ ನೀರು



ಕಾರವಾರ : ಪ್ರತಿನಿತ್ಯ ನೀಲಸಾಗರ ವೀಕ್ಷಿಸುವ ಜನರಿಗೆ ಅಚ್ಚರಿ ಮೂಡಿದೆ . ಸಾಗರದ ನೀರು ವಿಸ್ಮಯದ ರೀತಿಯಲ್ಲಿ ಹಸಿರು ಬಣ್ಣಕ್ಕೆ ತಿರುಗಿದೆ . ಇದನ್ನು ವೀಕ್ಷಿಸಿದ ಜನ ಏನೊ ಗಂಡಾಂತರ ಕಾದಿದೆ ಎಂದು ಆತಂಕಪಡುವ ವಾತಾವರಣ ಇದೀಗ ನಿರ್ಮಾಣವಾಗಿದೆ .

 ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಹಸಿರು ಬಣ್ಣದ ಅಲೆಗಳು ದಡಕ್ಕಪ್ಪಳಿಸಿ . ಕಾರವಾರದಿಂದ ಗೋವಾದ ಕಾಣಕೋಣದವರೆಗೂ ಸಮುದ್ರ ಹಸಿರು ಬಣ್ಣಕ್ಕೆ ತಿರುಗಿರುವುದನ್ನು ಗಮನಿಸಿದ ಮೀನುಗಾರರು ಆತಂಕಗೊಂಡಿದ್ದಾರೆ
“ಮಳೆಗಾಲದಲ್ಲಿ ನದಿ ನೀರು ಹೆಚ್ಚಿನ ಪ್ರಮಾಣದಲ್ಲಿ ಸಮುದ್ರ ಸೇರುತ್ತದೆ. ಇದರಿಂದ ಖನಿಜಾಂಶದ ಪ್ರಮಾಣ ಸಮುದ್ರದಲ್ಲಿ ಜಾಸ್ತಿಯಾಗುವುದಿಂದ ಈ ಖನಿಜಾಂಶವನ್ನು ಬಳಸಿಕೊಳ್ಳುವ ಸೂಕ್ಷ್ಮಜೀವಿಗಳು ಪಾಚಿಯನ್ನು (ಅಲ್ಗೆ) ತಯಾರಿಸಿಕೊಳ್ಳುತ್ತದೆ. ಇದನ್ನು ನಾಕ್ಟುಲಿಕಾ ಎಂದು ಕರೆಯಲಾಗುತ್ತದೆ. ಈ ಪಾಚಿ ಅನೇಕ ಜಲಚರಗಳಿಗೆ ಆಹಾರವೂ ಆಗಿದೆ. ಕಳೆದ ಕೆಲವು ದಿನಗಳಿಂದ ಇದ್ದಕ್ಕಿದ್ದಂತೆ ಮಳೆ ಕಡಿಮೆಯಾಗಿ ಬಿಸಿಲಿನ ಪ್ರಮಾಣ ಹೆಚ್ಚಿರುವುದರಿಂದ ಸಮುದ್ರದಲ್ಲಿ ಪಾಚಿ ಹೆಚ್ಚಾಗಿದೆ. ಹಸಿರು ಬಣ್ಣದ ಪಾಚಿ ಅಳತೆ ಮೀರಿ ಹೆಚ್ಚಳವಾಗಿರುವ ಕಾರಣ ಅಲೆಗಳ ಮೂಲಕ ದಡಕ್ಕೆ ಬರುತ್ತಿದೆ. ಇದರಿಂದ ಸಮುದ್ರದ ಬಣ್ಣ ಹಸಿರಾಗಿ ಕಾಣಿಸುತ್ತಿದೆ. ಆದರೆ ಈ ಬಾರಿ ಸಮುದ್ರದಲ್ಲಿ ವಿಪರೀತವಾಗಿ ಪಾಚಿ ಬೆಳೆದಿದ್ದರಿಂದ ದಡದವರೆಗೂ ಬಂದು ತಲುಪಿದೆ. ಈ ರೀತಿ ಸಮುದ್ರ ಪಾಚಿ ಹೇರಳವಾಗಿ ದಡಕ್ಕೆ ಬರುವುದು ಅಪರೂಪ. ಪಾಚಿ ಜಲಚರಗಳಿಗೆ ಆಹಾರವಾಗಿದ್ದರೂ ಅಳತೆ ಮೀರಿ ವೃದ್ಧಿಯಾದರೆ ಮೀನುಗಳಿಗೆ ಹಾನಿಯಾಗುವ ಸಾಧ್ಯತೆ ಅಧಿಕವಾಗಿರುತ್ತದೆ” ಎಂದು ಕಡಲ ಜೀವಶಾಸ್ತ್ರದ ಪ್ರಾಧ್ಯಾಪಕ ಶಿವಕುಮಾರ ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ ಈ ಬಗ್ಗೆ ಸಂಶೋಧನೆ ನಡೆಸಲು ಅವರು ನೀರಿನ ಮಾದರಿಯನ್ನು ಗೋವಾದ ವಾಸ್ಕೋದಲ್ಲಿರುವ ನ್ಯಾಷನಲ್ ಅಂಟಾರ್ಟಿಕಾ ಓಶನ್ ರಿಸರ್ಚ್ ಸೆಂಟರಿಗೆ ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ.

No comments