Breaking News

ಭೂ ಸ್ವಾಧೀನ - ಬ್ರಹ್ಮಾಂಡ ಭ್ರಷ್ಟಾಚಾರದ ತನಿಖೆಗೆ ಆಗ್ರಹ

ಮಂಗಳೂರು - ಸೆ. 2, ದೇಶಾದ್ಯಂತ ಕೈಗಾರಿಕೆ ಅಥವಾ ಮೂಲಭೂತ ಸೌಕರ್ಯಗಳಿಗಾಗಿ  ಭೂಮಿ ಕಳೆದುಕೊಂಡವರು ಪ್ರತಿಭಟನೆ ಮಾಡುತ್ತಿರುವ ಸುದ್ದಿಗಳು ಬಂದರೆ, ಮಂಗಳೂರಿನಿಂದ ನಮ್ಮ 27 ಎಕರೆ ಭೂಮಿ ವಶಪಡಿಸಿಕೊಳ್ಳಿ, ಇನ್ನೊಂದು ಮೂರು ಎಕರೆ ತೆಗೆದುಕೊಳ್ಳಿ ಎಂದು ದುಂಬಾಳು ಬೀಳುವ ಘಟನೆಗಳನ್ನು ನೋಡಬಹುದಾಗಿದೆ. ಈ ಬಗ್ಗೆ ಪ್ರತಿಭಟನೆಯೂ ನಡೆದು ಒತ್ತಡ ತಂತ್ರವನ್ನು ಮುಂದುವರಿಸಿದ್ದಾರೆ.ಇದಕ್ಕೆ ಭಾಷ ಬಣ್ಣ, ಅರೋಗ್ಯ, ಪರಿಸರ ಕಾಳಜಿಯ ಬಣ್ಣ ನೀಡಲು ಯತ್ನಿಸುತ್ತಿದ್ದು ಈ ಬಗ್ಗೆ ವಿವಿಧ ಹಂತದಲ್ಲಿ, ಸಣ್ಣ ಸಣ್ಣ ಸಭೆಗಳು ನಡೆಯುತ್ತಿದೆ. ಕೆಲವು ಮಾಧ್ಯಮಗಳು ಯಾವುದೇ ವಿಮರ್ಶೆ ಇಲ್ಲದೆ ಇದಕ್ಕೆ ಪ್ರಚಾರ ನೀಡುತ್ತಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ಜೋಕಟ್ಟೆ ಗ್ರಾಮದ ಕೆಲವು ನಿವಾಸಿಗಳು  ಸರಕಾರಿ ಸೌಮ್ಯದ  MRPL ಸಂಸ್ಥೆಯನ್ನು ರಾಜ್ಯ ಸರಕಾರದ ಮಂತ್ರಿಗಳನ್ನು ಬಳಸಿಕೊಂಡು ಶೋಷಣೆ ಮಾಡುತ್ತಿರುವುದು ಗಮನಕ್ಕೆ ಬಂದಿರುವ ವಿಷಯ. ನವರತ್ನಗಳಲ್ಲಿ ಒಂದಾಗಿರುವ ಎಂ ಆರ್ ಪಿ ಎಲ್ ಸಂಸ್ಥೆ ಕಳೆದೊಂದು ದಶಕದಿಂದ ಉನ್ನತವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ರೀತಿಯ ನಡವಳಿಕೆಗಳು ಕಂಪನಿಯ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಇದು ನಮ್ಮ ದೇಶದ ಪ್ರಗತಿಗೆ ಮಾರಕ.

ಇವರು ನೀಡುತ್ತಿರುವ ಸಬೂಬು ಪರಿಸರ ಮಾಲಿನ್ಯ. ಇದಕ್ಕಾಗಿ ಇವರ ಬಳಿ ಏನಾದರೂ ವೈಜ್ಞಾನಿಕ ವರದಿಗಳು ಇವೆಯೇ? ಈ ಪರಿಸರ ಮಾಲಿನ್ಯ ಕೇವಲ 27 ಎಕರೆಗೆ ಸೀಮಿತವಾಗಿದೆಯೇ ಅಥವಾ ಎಂ ಆರ್ ಪಿ ಎಲ್ ಸಂಸ್ಥೆಯ ಹತ್ತಿರದ ಗ್ರಾಮಗಳಾದ ಕಳವಾರು, ಬಾಳ, ಬಜ್ಪೆ, ಕೆಂಜಾರು, ಪೆರ್ಮುದೆ, ಶಿಬರೂರು, HPCL ಕಾಲನಿ, ಮರವೂರು, ಕಾಯರ್ ಕಟ್ಟೆ ಮತ್ತಿತರ ಆಸುಪಾಸಿನ ಗ್ರಾಮಗಳಿಗೆ ಈ ತೊಂದರೆ ಇಲ್ಲವೇ?

MSEZ ಎಂಬುವುದು ಅವ್ಯವಹಾರಗಳ ಆಗರವಾಗಿದ್ದು, ಸಂತ್ರಸ್ತರು ಎಂಬ ನೆಪದಲ್ಲಿ ಯಾರ್ಯಾರೋ ಬಂದು ಸೇರಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಸ್ಥಳೀಯ ಪಂಚಾಯತ್ ಬೇಕಾಬಿಟ್ಟೆ ಡೋರ್ ನಂಬರ್ ಗಳನ್ನು ನೀಡಿದ್ದು ಇದರ ಬಗ್ಗೆ ಸೂಕ್ತವಾದ ತನಿಖೆ ಆಗಬೇಕಾಗಿದೆ.

ನೌಕರಿ ಗಿಟ್ಟಿಸಿಕೊಳ್ಳಲು ಜಾಗ ಕಳೆದುಕೊಂಡವರಿಗೆ ಲಂಚ ನೀಡಿ, ಅವರ ವಾರಸುದಾರರು ಎಂದು ನಕಲಿ ಸಂತ್ರಸ್ತರ ಪತ್ರ ಪಡೆದು ಈಗಾಗಲೇ ಉದ್ಯೋಗ ಪಡೆದುಕೊಂಡಿರುವ ಬಗ್ಗೆ ಮಾಹಿತಿ ಬಂದಿದ್ದು, ವಿದ್ಯಾವಂತ ಉದ್ಯೋಗ ಆಕಾಂಕ್ಷಿಗಳು ಇದರ ಬಗ್ಗೆ ತನಿಖೆಗೆ ಒತ್ತಾಯಿಸುತ್ತಿದ್ದಾರೆ.

ನೈಜ್ಯ ಸಂತ್ರಸ್ಥರಿಗಾಗಿ ಹಾಕಿಕೊಂಡ ಯೋಜನೆಗಳು ಇತರರ ಪಾಲಾಗುತ್ತಿರುವುದು, ಈ ಪರಿಸರಕ್ಕೆ ಸಂಬಂಧಪಡದ ವ್ಯಕ್ತಿಗಳು ಅದರ ಫಲಾನುಭವಿಗಳಾಗುತ್ತಿರುವುದು ನಿಜವಾಗಿಯೂ ಖೇದಕರ. ಒಬ್ಬೊಬ್ಬರ ಹೆಸರಲ್ಲಿ ಹತ್ತಾರು ಡೋರ್ ನಂಬರ್ ಗಳಿದ್ದು, ಆ ಮೂಲಕ ಸರ್ಕಾರದ ಕೋಟ್ಯಾಂತರ ರೂಪಾಯಿಗಳನ್ನು ಜೇಬಿಗಳಿಸುವ ಪ್ರಯತ್ನ ನಡೆಯುತ್ತಿದೆ. ಹೋರಾಟದ ಹೆಸರಿನಲ್ಲಿ ದಂಧೆ ನಡೆಯುತ್ತಿದ್ದು, ಇದಕ್ಕೆ ಕೆಲವು ಸ್ಥಳೀಯ ಜನಪ್ರತಿನಿಧಿಗಳು ಕೂಡ ಪರೋಕ್ಷ ಬೆಂಬಲ ನೀಡುತ್ತಿರುವುದು ಖೇದಕರ.

ವಿಶೇಷವಾಗಿ ಜೋಕಟ್ಟೆ ಗ್ರಾಮ ಪಂಚಾಯಿತಿನಲ್ಲಿ ನೀಡಿರುವ ಡೋರ್ ನಂಬರ್ ಗಳ ಬಗ್ಗೆ ಸೂಕ್ತ ತನಿಖೆ ಮಾಡಿ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂಬುವುದು ವಿದ್ಯಾವಂತ ನಿರುದ್ಯೋಗಿ ಯುವಕರ ಬೇಡಿಕೆಯಾಗಿದೆ.

ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಗಮನ ಹರಿಸಿ ಭ್ರಷ್ಟಾಚಾರಗಳಿಗೆ ಅವಕಾಶ ಮಾಡಿಕೊಡಬಾರದೆಂದು ಸುದ್ದಿ ಪತ್ರಿಕೆ ಆಶಿಸುತ್ತದೆ.

No comments